ಭಾರತದ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿದ ಪಾಕಿಸ್ತಾನ
ವಿಶ್ವಸಂಸ್ಥೆ: ಕಳೆದ ಹಲವು ತಿಂಗಳಿನಿಂದಲೂ ಅಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರೆಸಿಕೊಂಡು ಬಂದಿರುವ ಪಾಕಿಸ್ತಾನ ಇದೀಗ ತನ್ನದೇನೂ ತಪ್ಪಿಲ್ಲದಂತೆ ವರ್ತಿಸಿದ್ದು, ಗಡಿ ನಿಯಂತ್ರಣಾ ರೇಖೆಯಲ್ಲಿ ಭಾರತ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾನುವಾರ ಮತ್ತೆ ಪತ್ರ ಬರೆದಿದೆ.
ಈ ಕುರಿತಂತೆ ರಷ್ಯಾದ ರಾಯಭಾರಿ ವಿಟಲಿ ಚರ್ಕಿನ್ ಅವರಿಗೆ ಪತ್ರ ಬರೆದಿರುವ ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ಶಾಸ್ವತ ಪ್ರತಿನಿಧಿ ಮಲೀಹಾ ಲೋಧಿ, ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, 245ಕ್ಕೂ ಹೆಚ್ಚು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಇದರ ಪರಿಣಾಮ ಸ್ಥಳೀಯ ಹಲವು ನಾಗರೀಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದ್ದು, ಕೂಡಲೇ ಭಾರತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆಂದು ತಿಳಿದುಬಂದಿದೆ.
ಅಲ್ಲದೆ, ಕದನ ವಿರಾಮ ಹಾಗೂ ಅಪ್ರಚೋದಿತ ಗುಂಡಿನ ದಾಳಿ ಕುರಿತಂತೆ ವಿವರಣೆ ನೀಡುವಂತೆ ಭಾರತವನ್ನು ಸ್ಪಷ್ಟನೆ ಕೇಳುವಂತೆಯೂ ಲೋಧ ಭದ್ರತಾ ಮಂಡಳಿಯನ್ನು ಒತ್ತಾಯಿಸಿದ್ದು, ಭಾರತ ಕದನ ವಿರಾಮ ಉಲ್ಲಂಘಿಸಿರುವ ಕುರಿತಂತೆ ಭದ್ರತಾ ಮಂಡಳಿಗೆ ಪತ್ರದಲ್ಲಿ ಅಂಕಿ ಅಂಶಗಳನ್ನು ಒದಗಿಸಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ