
ಜೈಸಲ್ಮಾರ್: ಭಾರತವನ್ನು ನಾಶ ಮಾಡಲು ಪರೋಕ್ಷವಾಗಿ ಈಗಾಗಲೇ ನಾನಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿರುವ ಪಾಕಿಸ್ತಾನ ಇದೀಗ ರಾಜಸ್ಥಾನದಲ್ಲಿನ ಭಾರತ-ಪಾಕ್ ಗಡಿಯಲ್ಲಿನ ಜಲಾಶಯಗಳಿಗೆ ವಿಷ ಬೆರಸಲು ಯೋಜನೆ ರೂಪಿಸುತ್ತದೆ ಎಂಬ ಆಘಾತಕಾರಿ ಸಂಗತಿಯೊಂದನ್ನು ಗುಪ್ತಚರ ಇಲಾಖೆ ಬುಧವಾರ ಬಹಿರಂಗ ಪಡಿಸಿದ್ದು, ಭದ್ರತಾಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.
ಈ ಹಿಂದೆಯೂ ಪಾಕಿಸ್ತಾನ ಭಾರತದ ಮಾಹಿತಿಗಳನ್ನು ಕಸಿಯುವ ಸಲುವಾಗಿ ಶಾಂತಿದೂತ ಪಾರಿವಾಳಗಳನ್ನು ಭಾರತಕ್ಕೆ ಕಳುಹಿಸಿ ಗೂಢಚರ್ಯೆ ನಡೆಸುವ ಪ್ರಯತ್ನ ಮಾಡಿತ್ತು. ಇದೀಗ ಜೀವಜಲದ ಮೂಲಕವೂ ಭಾರತೀಯರ ಪ್ರಾಣ ತೆಗೆಯಲು ಪಾಕಿಸ್ತಾನ ಯೋಜನೆ ರೂಪಿಸುತ್ತಿದೆ ಎಂಬ ಭಯಾನಕ ಸತ್ಯವನ್ನು ಸಂಗತಿಯೊಂದನ್ನು ಗುಪ್ತಚರ ಇಲಾಖೆ ಹೊರಹಾಕಿದೆ.
ಗುಪ್ತಚರ ಇಲಾಖೆ ನೀಡಿರುವ ಎಚ್ಚರಿಕೆಯಿಂದಾಗಿ ಈಗಾಗಲೇ ಸಾಕಷ್ಟು ಎಚ್ಚರಿಕೆ ವಹಿಸಿರುವ ಜಿಲ್ಲಾಡಳಿತ ಮಂಡಳಿಯು ರಾಜಸ್ಥಾನದ ಸುತ್ತಮುತ್ತ ಹಳ್ಳಿಗಳಿಗೆ ಮತ್ತು ಸೇನೆಗೆ ನೀರನ್ನೊದಗಿಸುವ ಜೈಸಲ್ಮಾರ್ ಮತ್ತು ಬದ್ಮೇರ್ ಜಲ್ಲೆಗಳ ಜಲಾಶಯಗಳ ಬಳಿ ಕಣ್ಗಾವಲಿರಿಸಿದೆ ಎಂದು ತಿಳಿದುಬಂದಿದೆ.
ಜಲಾಶಯಗಳನ್ನು ವಿಷಯುಕ್ತವಾಗುವಂತೆ ಮಾಡಲು ಪಾಕಿಸ್ತಾನ ಯೋಜನೆ ರೂಪಿಸಿದ್ದು, ಈ ಬಗ್ಗೆ ಕಟ್ಟೆಚ್ಚರದಿಂದ ಇರುವಂತೆಯೂ ಹಾಗೂ ಇಂತಹ ಚಟುವಟಿಕೆಗಳು ನಡೆಯಂತೆಯೂ ನೋಡುಕೊಳ್ಳುವಂತೆ ಸೂಚನೆ ನೀಡಿರುವ ನೀರು ಪೂರೈಕೆ ಅಧಿಕಾರಿಗಳು ಜಲಾಶಯಗಳಿಂದ ಸುತ್ತಮುತ್ತ ಹಳ್ಳಿಗಳ ಮನೆಗಳಿಗೂ ನೀರು ಪೂರೈಕೆಯಾಗುವುದರಿಂದ ಸ್ಥಳೀಯ ನಾಗರೀಕರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರರ (ಎನ್ಎಸ್ಎ) ಮಟ್ಟದ ಮಾತುಕತೆ ರದ್ದಾಗಿರುವ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆಗಳ ನಡುವಣ ಮಹಾನಿರ್ದೇಶಕರ (ಡಿಜಿ) ಸಭೆ ಇಂದು ನಡೆಯಲಿದ್ದು, ಗುಜರಾತ್ ರಣ್ ಆಫ್ ಕಚ್ ನಲ್ಲಿ ನಡೆಯುತ್ತಿರುವ ಒಳ ನುಸುಳುವಿಕೆ, ಮಾದಕ ವಸ್ತು ಕಳ್ಳ ಸಾಗಣೆ, ಏಕಾಂಗಿ ವ್ಯಕ್ತಿಗಳ ದಾಳಿ ವಿಚಾರವನ್ನು ಈ ಮಾತುಕತೆ ವೇಳೆ ಪ್ರಮುಖವಾಗಿ ಪ್ರಸ್ತಾಪಿಸಲು ಭಾರತ ಸಜ್ಜಾಗಿದೆ.
Advertisement