

ಲಖನೌ: ಸಬ್ ಇನ್ಸ್ ಪೆಕ್ಟರ್ ಕ್ರೌರ್ಯಕ್ಕೆ ತುತ್ತಾಗಿ, ಮತ್ತೆ ಸರ್ಕಾರದಿಂದ ಹೊಸ ಟೈಪ್ ರೈಟರ್ ಪಡೆದ ವೃದ್ಧನಿಗೆ ಈಗ ಬೆದರಿಕೆ ಕರೆ ಬಂದಿದೆ.
ಸಬ್ ಇನ್ಸ್ ಪೆಕ್ಟರ್ ಟೈಪ್ ರೈಟರ್ ಹೊಡೆದು ಹಾಕುತ್ತಿರುವ ದೃಶ್ಯ ವೈರಲ್ ಆಗುತ್ತಿದ್ದಂತೆ. ಅಲ್ಲಿನ ಸರ್ಕಾರ ಸಬ್ ಇನ್ಸ್ ಪೆಕ್ಟರ್ ನ್ನು ಅಮಾನತುಗೊಳಿಸಿತು. ಇದಾದ ಬೆನ್ನಲ್ಲೇ, ಹಿರಿಯ ಟೈಪಿಸ್ಟ್ ಗೆ ಬೆದರಿಕೆ ಕರೆ ಬಂದಿದೆಯಂತೆ. ಈ ಹಿನ್ನಲೆಯಲ್ಲಿ ವೃದ್ಧನಿಗೆ ಪೊಲೀಸ್ ಸೆಕ್ಯೂರಿಟಿ ನೀಡಲಾಗಿದ್ದು. ವೃದ್ಧನ ಮನೆಯಿಂದ ಕೆಲಸ ಮಾಡುವ ಜಾಗಕ್ಕೆ ಪೊಲೀಸರು ಕರೆದೊಯ್ಯುತ್ತಾರೆ ಎಂದು ಪೊಲೀಸರು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
65 ವರ್ಷದ ಕೃಷ್ಣಕುಮಾರ್ ಎಂಬುವವರು ಇಲ್ಲಿನ ಅಂಚೆಕಚೇರಿಯೊಂದರ ಎದುರು ಟೈಪ್ ರೈಟರ್ ಇಟ್ಟುಕೊಂಡು, ದುಡಿಮೆ ಮಾಡುತ್ತಿದ್ದರು. ಕಳೆದ ಶನಿವಾರ ಅಲ್ಲಿಗೆ ಧಾವಿಸಿದ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಕುಮಾರ್ ಭದ್ರತೆಯ ನೆಪ ಹೇಳಿ ತಾತನ ಟೈಪ್ ರೈಟರನ್ನೇ ಬೂಟುಗಾಲಿನಲ್ಲಿ ಹೊಡೆದು ಹಾಕಿದ್ದರು.
ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಉತ್ತರ ಪ್ರದೇಶದ ಸರ್ಕಾರ ಅಧಿಕಾರಿಯನ್ನು ಅಮಾನತುಗೊಳಿಸಿ, ವೃದ್ಧನಿಗೆ ಹೊಸ ಟೈಪ್ ರೈಟರ್ ಮತ್ತು ರು.1 ಲಕ್ಷವನ್ನು ಕೊಡುಗೆಯಾಗಿ ನೀಡಿತ್ತು.