ಬಿಜೆಪಿಗೆ ಆರ್ ಎಸ್ಎಸ್ ಸುಪ್ರೀಂ ಕೋರ್ಟ್ ಇದ್ದ ಹಾಗೆ: ನಿತೀಶ್ ವ್ಯಂಗ್ಯ

ಭಾರತೀಯ ಜನತಾ ಪಕ್ಷಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ದಳ ಒಂದು ರೀತಿಯ ಸುಪ್ರೀಂ ಕೋರ್ಟ್ ಇದ್ದಂತೆ. ಹೀಗಾಗಿ ಆರ್ ಎಸ್ ಎಸ್ ಏನೇ ಹೇಳಿದರೂ ಬಿಜೆಪಿಯವರು ತಲೆದೂಗುತ್ತಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ...
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (ಸಂಗ್ರಹ ಚಿತ್ರ)
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (ಸಂಗ್ರಹ ಚಿತ್ರ)

ಪಾಟ್ನಾ: ಭಾರತೀಯ ಜನತಾ ಪಕ್ಷಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ದಳ ಒಂದು ರೀತಿಯ ಸುಪ್ರೀಂ ಕೋರ್ಟ್ ಇದ್ದಂತೆ. ಹೀಗಾಗಿ ಆರ್ ಎಸ್ ಎಸ್ ಏನೇ ಹೇಳಿದರೂ ಬಿಜೆಪಿಯವರು  ತಲೆದೂಗುತ್ತಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಹಾ ಮೈತ್ರಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿತೀಶ್ ಕುಮಾರ್ ಅವರು ಬಿಜೆಪಿ  ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇನ್ನು ಮೀಸಲಾತಿ ಕುರಿತಂತೆ ಮೋಹನ್ ಭಾಗವತ್ ಅವರು ನೀಡಿರುವ ಹೇಳಿಕೆ ಕುರಿತು ಮಾತನಾಡಿದ ನಿತೀಶ್ ಕುಮಾರ್, ಬಿಜೆಪಿ ಪಾಲಿಗೆ  ಆರ್ ಎಸ್ ಎಸ್ ಒಂದು ರೀತಿಯ ಸುಪ್ರೀಂ ಕೋರ್ಟ್ ಇದ್ದಂತೆ. ಹೀಗಾಗಿ ಆರ್ ಎಸ್ ಎಸ್ ಮುಖಂಡರು ಏನೇ ಹೇಳಿದರೂ ಅವರು ತಲೆಯಾಡಿಸುತ್ತಾರೆ. ಮೀಸಲಾತಿ ವಿಚಾರಕ್ಕೆ  ಸಂಬಂಧಿಸಿದಂತೆ ಮೋಹನ್ ಭಾಗವತ್ ಅವರ ಅಭಿಪ್ರಾಯ ಸರಿಯಿಲ್ಲ. ಮೀಸಲಾತಿ ಕುರಿತು ನಿರ್ಧಾರ ಕೈಗೊಳ್ಳಲು ಆರ್ ಎಸ್ ಎಸ್ ಹೊಸ ಹೆಚ್ಚುವರಿ ಸಾಂವಿಧಾನಿಕ ಸಮಿತಿ ಬೇಕು ಎಂದು  ಹೇಳುತ್ತಿದೆ.  ಆದರೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಇದು ತುಂಬಾ ಅಪಾಯಕಾರಿ ಯೋಚನೆ ಎಂದು ನಿತೀಶ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಬಿಹಾರ ಚುನಾವಣೆ ಕುರಿತು ಮಾತನಾಡಿದ ನಿತೀಶ್ ಕುಮಾರ್ ಅವರು, ಸಮಾಜದ ಎಲ್ಲ ಸಮುದಾಯಗಳನ್ನು ಪರಿಗಣಿಸಿ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ ಮಹಾ  ಮೈತ್ರಿಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಾಗಲೀ ಅಥವಾ ಸಮಸ್ಯೆ ಮತ್ತು ದೂರುಗಳಿಲ್ಲ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಸಾಮಾನ್ಯವಾಗಿ ಹೆಚ್ಚು ಸಮಯ  ತೆಗೆದುಕೊಳ್ಳುತ್ತದೆ. ಅಭ್ಯರ್ಥಿಗಳ ಪಟ್ಟಿಯನ್ನು ನಾನೇ ಬಿಡುಗಡೆ ಮಾಡಲು ಲಾಲು ಪ್ರಸಾದ್ ಅವರು ಸೇರಿದಂತೆ ಎಲ್ಲರೂ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ. ನಾವು ಒಂದನ್ನಂತೂ  ಪ್ರಜೆಗಳಿಗೆ ಸ್ಪಷ್ಟಪಡಿಸಬೇಕು. ಅದೇನೆಂದರೆ ನಾವು ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಆದರೆ ಬಿಜೆಪಿ ಪಕ್ಷಕ್ಕೆ ಒಡೆದು ಆಳುವುದರಲ್ಲಿಯೇ ಹೆಚ್ಚು ನಂಬಿಕೆ  ಇದೆ ಎಂದು ನಿತೀಶ್ ಹೇಳಿದರು.

ಒಟ್ಟಾರೆ ಬಿಹಾರ ಚುನಾವಣೆಯ ಮತದಾನ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಮುಖಂಡ ಮಾತಿನ ಲಹರಿ ಜೋರಾಗುತ್ತಿದ್ದು, ಚುನಾವಣೆ ಮುಗಿಯುವುದರೊಳಗಾಗಿ ಏನೆಲ್ಲಾ  ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com