ಕಚ್ಚಿದ ಹಾವಿನ ಚರ್ಮ ಸುಲಿದು ಜೀವಂತವಾಗಿ ತಿಂದು ಸೇಡು ತೀರಿಸಿಕೊಂಡ..!

ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನಗೆ ಕಚ್ಚಿದ ಹಾವಿನ ಚರ್ಮ ಸುಲಿದು ತಿಂದ ವಿಚಿತ್ರ ಘಟನೆ ಆಗ್ರಾದಲ್ಲಿ ನಡೆದಿದೆ...
ಕಚ್ಚಿದ ಹಾವನ್ನೇ ತಿಂದ (ಸಾಂದರ್ಭಿಕ ಚಿತ್ರ)
ಕಚ್ಚಿದ ಹಾವನ್ನೇ ತಿಂದ (ಸಾಂದರ್ಭಿಕ ಚಿತ್ರ)

ಆಗ್ರಾ: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನಗೆ ಕಚ್ಚಿದ ಹಾವಿನ ಚರ್ಮ ಸುಲಿದು ತಿಂದ ವಿಚಿತ್ರ ಘಟನೆ ಆಗ್ರಾದಲ್ಲಿ ನಡೆದಿದೆ.

ಹೌದು. ಹಾವು ಕಂಡರೆ ಹೆದರಿ ಮಾರುದ್ಧ ದೂರ ಓಡುವ ಮಂದಿಯೇ ಹೆಚ್ಚು. ಇನ್ನು ಕಚ್ಚಿದರಂತೂ ಮುಗಿದೇ ಹೋಯಿತು. ಹಾವಿನ ವಿಷಕ್ಕಿಂತ ವೇಗವಾಗಿ ಕೆಲವರು ಭಯದಿಂದಲೇ ಸಾಯುತ್ತಾರೆ.  ಆದರೆ ಇಲ್ಲೊಬ್ಬ ಮಹಾಶಯ ತನಗೆ ಕಚ್ಚಿದ ಹಾವಿನ ಚರ್ಮವನ್ನೇ ಸುಲಿದು ತಿನ್ನುವ ಮೂಲಕ ತನ್ನ ಸೇಡು ತೀರಿಸಿಕೊಂಡಿದ್ದಾನೆ. ಆಗ್ರಾದ ಫತೇಹಬಾದ್ ನಲ್ಲಿ ಈ ಘಟನೆ ನಡೆದಿದ್ದು, 25  ವರ್ಷದ ರಾಜೇಶ್ ಕುಮಾರ್ ಎಂಬಾತ ತನಗೆ ಕಚ್ಚಿದ ಹಾವಿನ ಚರ್ಮವನ್ನು ಸುಲಿದು ತಿಂದಿದ್ದಾನೆ ಎಂದು ತಿಳಿದುಬಂದಿದೆ.

ಫತೇಹಬಾದ್ ನಲ್ಲಿ ರಾಜೇಶ್ ಕುಮಾರ್ ಚಿರಪರಿಚಿತ. ದಿನನಿತ್ಯ ಕುಡಿದು ರಸ್ತೆಗಳಲ್ಲೇ ಮಲಗುವುದು ಈತನಿಗೆ ಮಾಮೂಲು. ಅಲ್ಲದೆ ರಸ್ತೆಗಳಲ್ಲಿ ಹೋಗಿ-ಬರುವವರನ್ನು ಛೇಡಿಸುವುದು ಮತ್ತು  ಅವರಿಂದ ಹೊಡೆತ ತಿನ್ನುವುದು ಈತನ ನಿತ್ಯದ ಕಾಯಕ. ತನ್ನ ಈ ದುರಾಚಾರದಿಂದಲೇ ರಾಜೇಶ್ ಕುಮಾರ್ ಸುತ್ತಮುತ್ತಲ ಪ್ರದೇಶಗಳಲ್ಲಿ ಕುಖ್ಯಾತಿ ಗಳಿಸಿದ್ದ. ಆದರೆ ಕಳೆದ ಗುರುವಾರ ಸಂಜೆ  ಈತ ಮಾಡಿದ ಕೆಲಸವೊಂದು ಈತನನ್ನು ರಾಷ್ಟ್ರ ವ್ಯಾಪಿ ಸುದ್ದಿಯಾಗುವಂತೆ ಮಾಡಿದೆ.

ಗುರುವಾರ ಮಧ್ಯಾಹ್ನ ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಬಿದ್ದಿದ್ದ ರಾಜೇಶ್ ಕುಮಾರ್ ಗೆ ವಿಷ ಸರ್ಪವೊಂದು ಕಚ್ಚಿದೆ. ಹಾವು ಕಚ್ಚಿದ ಬಳಿಕ ಎಚ್ಚೆತ್ತುಕೊಂಡು ರಾಜೇಶ್ ರೋಷದಿಂದ ಹಾವನ್ನು ಹಿಡಿದು  ಅದು ಜೀವಂತವಿರುವಾಗಲೇ ನೇರವಾಗಿ ಅದರ ತಲೆಗೆ ಬಾಯಿ ಹಾಕಿ ತಿಂದಿದ್ದಾನೆ. ಬಳಿಕ ಅದರ ಚರ್ಮವನ್ನು ಸುಲಿದು ಬಾಲವನ್ನು ತಿಂದಿದ್ದಾನೆ. ನಂತರ ತನ್ನ ಬಳಿ ಇದ್ದ ಮದ್ಯವನ್ನು ಸೇವಿಸಿ  ಹಾವನ್ನು ಅರಗಿಸಿಕೊಂಡಿದ್ದಾನೆ.

ಈ ದಿಢೀರ್ ಘಟನೆಯಿಂದ ದಿಗ್ಭ್ರಾಂತಗೊಂಡ ಸ್ಥಳೀಯರು ಈ ವಿಚಾರವನ್ನು ರಾಜೇಶ್ ನ ತಾಯಿ ಚಂದಾ ದೇವಿ ಅವರಿಗೆ ತಿಳಿಸಿದ್ದಾರೆ. ಕೂಡಲೇ ಮನೆಗೆ  ಬಂದ ಚಂದಾ ದೇವಿ ಈ ಬಗ್ಗೆ ರಾಜೇಶ್ ಬಳಿ ವಿಚಾರಿಸಿದಾಗ ಆತ ನಗುತ್ತಲೇ ನಡೆದ ವಿಚಾರವನ್ನು ಹೇಳಿದ್ದಾನೆ. ಅಲ್ಲದೆ ತಾನು ತಿಂದು ಬಿಸಾಡಿದ ಹಾವಿನ ದೇಹದ ಉಳಿದ ಭಾಗವನ್ನು  ತೋರಿಸಿದ್ದಾನೆ. ತಲೆ ಮತ್ತು ಬಾಲವಿಲ್ಲದ ಹಾವಿನ ದೇಹವನ್ನು ನೋಡಿ ತಾಯಿ ಚಂದಾ ದೇವಿ ಆಘಾತಗೊಂಡಿದ್ದು, ಕೂಡಲೇ ಆತನನ್ನು ಪರೀಕ್ಷಿಸಿದ್ದಾರೆ. ಆದರೆ ವಿಚಿತ್ರವೆಂದರೆ ಹಾವನ್ನು ತಿಂದ  ರಾಜೇಶ್ ಆರೋಗ್ಯವಾಗಿಯೇ ಇದ್ದ.

ಕೂಡಲೇ ರಾಜೇಶ್ ನನ್ನು ಸ್ಥಳೀಯ ವೈದ್ಯರ ಬಳಿಗೆ ಕರೆದೊಯ್ದು ಪರೀಕ್ಷೆ ನಡೆಸಲಾಗಿ, ಹಾವಿನ ವಿಷ ಆತನ ದೇಹಕ್ಕೆ ಏರದೇ ಇರುವುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಹಾವು ಕಚ್ಚಿದರೂ  ರಾಜೇಶ್ ಗೆ  ಯಾವುದೇ ರೀತಿಯ ಆರೋಗ್ಯಕ ಸಮಸ್ಯೆ ಎದುರಾಗದ ಕುರಿತು ವೈದ್ಯರ ಬಳಿ ವಿಚಾರಿಸಿದಾಗ ವಿಷಕಾರಿಯಲ್ಲ ಅನೇಕ ಬಗೆಯ ಹಾವುಗಳಿವೆ. ಅದರಲ್ಲಿ ಯಾವುದಾರೂ ಒಂದು  ಹಾವು ರಾಜೇಶ್ ಗೆ ಕಚ್ಚಿರಬೇಕು ಎಂದು ಹೇಳಿದ್ದಾರೆ.

ಒಟ್ಟಾರೆ ತೆಲುಗಿನ ಸರ್ವ ರೋಗಾನಿಕಿ ಸಾರಾಯೇ ಮಂದು (ಸರ್ವ ರೋಗಕ್ಕೂ ಸಾರಾಯಿ ಮದ್ದು) ಎನ್ನುವ ಗಾದೆ ರಾಜೇಶ್ ಕುಮಾರ್ ನ ಪಾಲಿಗೆ ನಿಜವಾಯಿತೇ ಎಂಬುದು ಜನರ ಯಕ್ಷ  ಪ್ರಶ್ನೆಯಾಗಿದೆ. ಅಲ್ಲದೆ ರಾಜೇಶ್ ನ ಈ ಕೃತ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com