
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಜಯಲಲಿತಾ ವಿರುದ್ದ ಮಂಗಳಮುಖಿಯೊಬ್ಬರು ಕಣಕ್ಕಿಳಿಯಲು ನಿರ್ಧರಿಸಿದ್ದಾರೆ
ತಮಿಳುನಾಡಿನ ಚೆನ್ನೈ ಮಹಾನಗರದ ಆರ್ ಕೆ ನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಜಯಲಲಿತಾ ಸ್ಪರ್ಧಿಸುತ್ತಿದ್ದು ಅವರ ಎದುರು 33 ವರ್ಷದ ದೇವಿ ಎನ್ನುವ ಮಂಗಳಮುಖಿ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ.
ತಮಿಳು ನಟ ಮತ್ತು ನಿರ್ದೇಶಕ ಸೀಮನ್ ಮುಂದಾಳುತ್ವದ ಎನ್ಟಿಕೆ (ನಾಮ್ ತಮಿಳರ್ ಕಚ್ಚಿ) ಎನ್ನುವ ಪಕ್ಷದಿಂದ ದೇವಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಗಮನಿಸಬೇಕಾದ ಅಂಶವೇನಂದರೆ, ಸಿಎಂ ವಿರುದ್ದ ಸ್ಪರ್ಧಿಸುತ್ತಿರುವ ದೇವಿ ಅಸಲಿಗೆ ಜಯಾಲಲಿತಾ ಅವರ ಅಭಿಮಾನಿಯಂತೆ.
ಸೇಲಂ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಟ್ಟಿ, ಹನ್ನೆರಡನೇ ಕ್ಲಾಸ್ ಓದಿರುವ ದೇವಿ ಸುಮಾರು ಇನ್ನೂರಕ್ಕೂ ಹೆಚ್ಚು ಬಡ ವಿದ್ಯಾಥಿಗಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದಾರೆ. ಇದರ ಜೊತೆಗೆ ವೃದ್ದಾಶ್ರಮದ ಅರವತ್ತು ಜನರ ಜಬಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಸಾಮಾಜಿಕ ಕಾರ್ಯಕರ್ತೆಯಾಗಿರುವ ದೇವಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ, ಒಂದು ವೇಳೆ ಗೆದ್ದು ಬಂದರೆ ಕ್ಷೇತ್ರದ ಅಭಿವೃದ್ದಿಗೆ ತನ್ನದೇ ಆದ ಯೋಜನೆಯನ್ನು ಹಾಕಿಕೊಂಡಿದ್ದಾರೆ ದೇವಿ. ನಾನು ಜಯಲಲಿತಾ ವಿರುದ್ಧ ಸ್ಪರ್ಧಿಸುತ್ತಿಲ್ಲ, ಕ್ಷೇತ್ರದ ಜನತೆಯ ಪ್ರತಿನಿಧಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಜಯಲಲಿತಾ ವಿರುದ್ದ ಗೆದ್ದರೂ ಗೆಲ್ಲಬಹುದು ಎನ್ನುವ ಸಣ್ಣ ವಿಶ್ವಾಸದಲ್ಲಿದ್ದೇನೆ. ಗೆದ್ದರೆ, ಆರ್ ಕೆ ನಗರವನ್ನು ಮೊದಲು ಕಸಮುಕ್ತ ಕ್ಷೇತ್ರವನ್ನಾಗಿ ಮಾಡಬೇಕು ಎನ್ನುವುದು ನನ್ನ ಉದ್ದೇಶ, ಜೊತೆಗೆ ಸರಕಾರೀ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಒದಗಿಸುವುದು ನನ್ನ ಆದ್ಯತೆ ಎಂದು ಹೇಳಿದ್ದಾರೆ. 235 ಸ್ಥಾನ ಹೊಂದಿರುವ ತಮಿಳುನಾಡು ವಿಧಾನಸಭೆಗೆ ಮೇ 16ರಂದು ಚುನಾವಣೆ ನಡೆಯಲಿದೆ.
Advertisement