
ಕೊಲ್ಲಂ: ಕೇರಳದ ಮೂಕಾಂಬಿಕ ದೇಗುಲದಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ದುರ್ಘಟನೆಯಲ್ಲಿ 109 ಮಂದಿ ಸಾವನ್ನಪ್ಪಿ 350 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಕೊಲ್ಲಂ ಜಿಲ್ಲೆಯಲ್ಲಿನ ಪಾರವೂರ್ ನಲ್ಲಿರುವ ಮೂಕಾಂಬಿಕ ದೇಗುಲದಲ್ಲಿ ವಾರ್ಷಿಕೋತ್ಸವ ಸಮಾರಂಭವನ್ನು ನಡೆಸಲಾಗುತ್ತಿತ್ತು. ಪ್ರತೀ ಬಾರಿಯಂತೆ ಈ ಬಾರಿಯೂ ದೇಗುಲದಲ್ಲಿ ಬಾಣಬಿರುಸುಗಳ ಪ್ರದರ್ಶನದ ನಡೆಸಲಾಗಿದೆ. ಆದರೆ, ಆಕಾಶದಲ್ಲಿ ಹಾರುವ ಬದಲು ಪಟಾಕಿಗಳು ನೆಲದಲ್ಲೇ ಸಿಡಿದ ಪರಿಣಾಮ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ದುರ್ಘಟನೆ ಮಧ್ಯರಾತ್ರಿ 3.30ರ ಸುಮಾರಿಗೆ ನಡೆಸಿದ್ದು, 109ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ 350ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಗಾಯಾಳುಗಳ ಸಹಾಯಕ್ಕೆ ನೆರವಾಗಿದ್ದಾರೆ.
ಇದರಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ವಿವಿಧ ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಘಟನೆ ಮಧ್ಯರಾತ್ರಿ ನಡೆದಿದ್ದು, ಪಟಾಕಿ ಹಚ್ಚುತ್ತಿದ್ದಂತೆ ಬೆಂಕಿಯ ಕಿಡಿಗಳು ಪಕ್ಕದಲ್ಲಿಯೇ ಪಟಾಕಿಗಳನ್ನು ಇರಿಸಲಾಗಿದ್ದ ಕಟ್ಟಡವೊಂದರ ಮೇಲೆ ಬಿದ್ದಿತ್ತು. ಇದರ ಪರಿಣಾಮ ನೆಲದಲ್ಲಿಯೇ ಪಟಾಕಿಗಳ ಸಿಡಿತ ದೊಡ್ಡ ಮಟ್ಟದಲ್ಲಿ ಆರಂಭವಾಯಿತು. ಕ್ಷಣಮಾತ್ರದಲ್ಲಿಯೇ ಪಟಾಕಿಗಳ ಸಿಡಿತ ಜನರ ಮೇಲೂ ಬೀಳಲು ಆರಂಭವಾಯಿತು ಎಂದು ಹೇಳಿದ್ದಾರೆ.
ಪಟಾಕಿ ಸಿಡಿತದಲ್ಲಿ ಯಾವುದೇ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿರಲಿಲ್ಲ. ಇದು ಸ್ಫರ್ಧೆಯಲ್ಲ. ಕೇರಳದಲ್ಲಿ ಯಾವುದೇ ದೇಗುಲದಲ್ಲಿ ವಾರ್ಷಿಕೋತ್ಸವ ಸಮಾರಂಭ ಆಚರಿಸಿದರೂ ಪಟಾಕಿಯನ್ನು ಸಿಡಿಸಲಾಗುತ್ತದೆ. ಇದನ್ನು ಕಂಬಮ್ ಎಂದು ಹೇಳಲಾಗುತ್ತದೆ ಎಂದು ಸ್ಥಳೀಯ ಶಾಸಕ ಪಿ.ಕೆ. ಗುರುದಾಸನೇ ಅವರು ಹೇಳಿದ್ದಾರೆ.
ಪಟಾಕಿ ಸಿಡಿದ ಪರಿಣಾಮ ಪಟಾಕಿಗಳನ್ನು ಇರಿಸಲಾಗಿದ್ದ ಕಟ್ಟಡ ಕೂಡ ನೆಲಕ್ಕುರುಳಿದ್ದು, ಗಾಯಾಳುಗಳ ಸಂಖ್ಯೆ ಹೆಚ್ಚಾಗಲು ಇದೂ ಕಾರಣವಾಯಿತು ಎಂದು ತಿಳಿದುಬಂದಿದೆ.
ಘಟನೆ ಕುರಿತಂತೆ ಮಾತನಾಡಿರುವ ರಾಜ್ಯ ಆರೋಗ್ಯ ಸಚಿವ ವಿ.ಎಸ್. ಶಿವಕುಮಾರ್ ಅವರು, ಘಟನೆಯಲ್ಲಿ ಗಾಯಗೊಂಡವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜನರಿಗೆ ಬೇಕಾದ ಎಲ್ಲಾ ರೀತಿಯ ಚಿಕಿತ್ಸೆಯನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಹೇಳಿದ್ದಾರೆ.
Advertisement