
ಕೇರಳದ ಮೂಕಾಂಬಿಕ ದೇಗುಲದಲ್ಲಿ ಆಯೋಜಿಸಲಾಗಿದ್ದ ಮಲ್ಸರ ಕಂಬಮ್ ಆಚರಣೆ ದೊಡ್ಡ ದುರಂತವನ್ನೇ ಸೃಷ್ಟಿಸಿದೆ. ದೇಗುಲದ ವಾರ್ಷಿಕೋತ್ಸವ ಸಮಾರಂಭ ಆಚರಣೆಯನ್ನು ಸಂತಸ ಹಾಗೂ ಸಡಗರದಿಂದ ಆಚರಿಸಲು ಮುಂದಾಗಿದ್ದ ದೇಗುಲದ ಆಡಳಿತ ಮಂಡಳಿಗೆ ಇದೀಗ ದೊಡ್ಡ ಆಘಾತವಾಗಿದೆ. ನಿನ್ನೆ ಆಯೋಜಿಸಲಾಗಿದ್ದ ಕಂಬಮ್ ಆಚರಣೆ ವೇಳೆ 85ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇಷ್ಚಕ್ಕೂ ಏನಿದು ಮಲ್ಸರ ಕಂಬಮ್ ಆಚರಣೆ...
ಜಾತ್ರಾಮಹೋತ್ಸವ ಅಥವಾ ದೇಗುಲದ ವಾರ್ಷಿಕೋತ್ಸವ ಸಮಾರಂಭದಲ್ಲಿ ದೇಗುಲದ ಆವರಣದಲ್ಲಿರುವ ದೊಡ್ಡದಾದ ಮೈದಾನದಲ್ಲಿ ಆಚರಿಸಲಾಗುವ ಬಾಣ ಬಿರುಸುಗಳ, ಸಿಡಿಮದ್ದುಗಳ ಪ್ರದರ್ಶನವೇ ಈ ಮತ್ಸರ ಕಂಬಮ್ ಆಚರಣೆ.
ಕಂಬಮ್ ಆಚರಣೆಯಲ್ಲಿ ಸ್ಥಳೀಯರು ಹಾಗೂ ಸಾಕಷ್ಟು ಊರಿನಿಂದ ಬಂದಂತಹ ಜನರು ಭಾಗವಹಿಸುತ್ತಾರೆ. ಕಂಬಮ್ ಆಚರಣೆ ಎಂದರೆ, ಸಿಕ್ಕಸಿಕ್ಕವರೆಲ್ಲಾ ಪಟಾಕಿ ಹಚ್ಚುವುದಲ್ಲ. ಪಟಾಕಿ ಸಿಡಿಸುವುದನ್ನು ದೇಗುಲ ಆಡಳಿತ ಮಂಡಳಿಯವರೇ ಆಯೋಜಿಸುತ್ತಾರೆ.
ದೇಗುಲದ ದೊಡ್ಡ ಮೈದಾನದಲ್ಲಿ ಕಂಬಮ್ ಗೆ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ಬೃಹತ್ ಪ್ರಮಾಣದ ಸಿಡಿಮದ್ದುಗಳನ್ನು ಬಳಕೆ ಮಾಡಲಾಗುತ್ತದೆ. ಆಯೋಜನೆ ಮಾಡುವಾಗ ಜನರು ಸ್ಥಳಕ್ಕೆ ಹೋಗುವಂತಿಲ್ಲ. ನುರಿತ ಕಾರ್ಮಿಕರು ಕಂಬಮ್ ತಯಾರಿ ಮಾಡುತ್ತಾರೆ. ಕಂಬಮ್ ವೀಕ್ಷಿಸುವವರು 100 ಮೀಟರ್ ದೂರವಿರಬೇಕು. ಸಾಮಾನ್ಯವಾಗಿ ಈ ಆಚರಣೆಯನ್ನು ಕತ್ತಲಾದ ನಂತರ ಆಚರಣೆ ಮಾಡಲಾಗುತ್ತದೆ. ಸಿಡಿಮದ್ದುಗಳನ್ನು ಸಿಡಿಸುವುದಕ್ಕೂ ಮುನ್ನ ಜನರನ್ನು ತೆರವುಗೊಳಿಸಲಾಗುತ್ತದೆ.
ಕಂಬಮ್ ಆಚರಣೆಗೂ ಮುನ್ನ ದೇಗುಲದ ಆಡಳಿತ ಮಂಡಳಿಯವರು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ನಂತರ ಭದ್ರತೆಗಾಗಿ ಸ್ಥಳೀಯ ಪೊಲೀಸರ ಬಳಿ ಅನುಮತಿ ಪಡೆಯಬೇಕು. ಅಧಿಕಾರಿಗಳು ಅನುಮತಿ ನೀಡಿದ ನಂತರವಷ್ಟೇ ಕಾರ್ಯಕ್ರಮವನ್ನು ಆಯೋಜಿಸಬೇಕು.
ಆದರೆ, ಈ ಪ್ರಕರಣದಲ್ಲಿ ಇಂತಹ ಯಾವುದೇ ನಿಯಮಗಳನ್ನು ಆಡಳಿತ ಮಂಡಳಿಯವರು ಪಾಲಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ.
ಮೊದಲಿಗೆ ಆಚರಣೆಗೂ ಮುನ್ನ ದೇಗುಲದ ಆಡಳಿತ ಮಂಡಳಿಯವರು ಜಿಲ್ಲಾಧಿಕಾರಿಗಳ ಅನುಮತಿಯನ್ನು ಕೇಳಬೇಕಿತ್ತು. ಆದರೆ, ಆಡಳಿತ ಮಂಡಳಿಯವರು ಅನುಮತಿ ಪಡೆಯದೆಯೇ ಕಾರ್ಯಕ್ರಮ ಆಯೋಜನೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಆಡಳಿತ ಮಂಡಳಿಯವರು ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕೊನೆಯ ಕ್ಷಣದಲ್ಲಿ ಆಚರಣೆಗೆ ಅನುಮತಿಯನ್ನು ನೀಡಲಾಗಿತ್ತು. ಹೀಗಾಗಿ ಸೂಕ್ತ ವ್ಯವಸ್ಥೆ ನಿರ್ಮಾಣಕ್ಕೆ ಸಮಯವಿರಲಿಲ್ಲ ಎಂದು ಹೇಳಿಕೊಂಡಿದೆ ಎಂದು ಹೇಳಲಾಗುತ್ತಿದೆ.
Advertisement