
ಮುಂಬೈ: 2008ರಲ್ಲಿ ನಡೆದ 26/11 ಮುಂಬೈ ದಾಳಿಯಲ್ಲಿ ಸಾವನ್ನಪ್ಪಿದವರಿಗೆ ರಾಜ ದಂಪತಿ ಪ್ರಿನ್ಸ್ ವಿಲಿಯಮ್ಸ್ ಮತ್ತು ಅವರ ಪತ್ನಿ ಕೇಟ್ ಮಿಡ್ಲ್ ಟನ್ ಭಾನುವಾರ ಗೌರವ ಸಲ್ಲಿಸಿದರು.
7 ದಿನಗಳ ಭಾರತ ಮತ್ತು ಭೂತಾನ್ ಪ್ರವಾಸ ಕೈಗೊಂಡಿರುವ ರಾಜದಂಪತಿ ಮುಂಬೈನ ಪ್ರತಿಷ್ಟಿತ ತಾಜ್ ಪ್ಯಾಲೆಸ್ ಹೊಟೆಲ್ ನಲ್ಲಿ ತಂಗಿದ್ದು, ಈ ವೇಳೆ 26/11 ಮುಂಬೈ ದಾಳಿ ಸ್ಮರಣಾರ್ಥ ಹೊಟೆಲ್ ನಲ್ಲಿ ಮೃತರಿಗಾಗಿ ನಿರ್ಮಿಸಲಾಗಿರುವ ವಿಶೇಷ ಸ್ಮಾರಕದ ಬಳಿ ಬಂದು ಗೌರವ ಸೂಚಿಸಿದರು.
ಬ್ರಿಟನ್ ಈ ರಾಜದಂಪತಿ ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದು, ನಾಳೆ ದೆಹಲಿಗೆ ಆಗಮಿಸಲಿದ್ದಾರೆ. ದೆಹಲಿಯಲ್ಲಿ ಸಂಸತ್ ಭವನ, ಇಂಡೀಯಾ ಗೇಟ್ ಮತ್ತು ಗಾಂಧಿ ಸ್ಮಾರಕಕ್ಕೆ ದಂಪತಿ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಏಪ್ರಿಲ್ 12 ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಔತಣ ಕೂಟವನ್ನೇರ್ಪಡಿಸಿದ್ದು, ಔತಣ ಕೂಟದ ಬಳಿಕ ದಂಪತಿಗಳು ಅಸ್ಸಾಂ ಗೆ ತೆರಳಲಿದ್ದಾರೆ. ಅಲ್ಲಿ ಖ್ಯಾತ ಕಝಿರಂಗಾ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡುವ ದಂಪತಿ ಬಳಿಕ ಬೂತಾನ್ ಗೆ ತೆರಳಲಿದ್ದಾರೆ.
ಬೂತಾನ್ ಭೇಟಿ ಬಳಿಕ ಮತ್ತೆ ಭಾರತಕ್ಕೆ ವಾಪಸಾಗುವ ದಂಪತಿ ವಿಶ್ವವಿಖ್ಯಾತ ತಾಜ್ ಮಹಲ್ ಗೆ ಭೇಟಿ ನೀಡಿ ಬಳಿಕ ದೆಹಲಿ ಮೂಲಕವಾಗಿ ಬ್ರಿಟನ್ ಗೆ ವಾಪಸ್ ತೆರಳಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಅವರು, "ರಾಜ ದಂಪತಿಗಳ ಭಾರತ ಪ್ರವಾಸ ಪ್ರಧಾನಿ ಮನಮೋಹನ್ ಸಿಂಗ್ ಅವರ ಯಶಸ್ವಿ ಬ್ರಿಟನ್ ಪ್ರವಾಸದ ಪ್ರತೀಕವಾಗಿದ್ದು, ದಂಪತಿಗಳ ಭೇಟಿಯಿಂದಾಗಿ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement