

ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧ ವಿವಾದಕ್ಕೆ ಸಂಬಂಧಪಟ್ಟಂತೆ ಸಂಪ್ರದಾಯಗಳು ಸಂವಿಧಾನವನ್ನು ಮೀರಿದ್ದೇ ಎಂದು ಸುಪ್ರೀಂ ಕೋರ್ಟ್ ಸೋಮವಾರ ಶಬರಿಮಲ ದೇವಸ್ಥಾನ ಟ್ರಸ್ಟ್ ನ ಪರ ವಕೀಲರನ್ನು ಪ್ರಶ್ನೆ ಮಾಡಿದೆ.
ಶಬರಿಮಲ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ದೇವಾಲಯದ ಆವರಣದಲ್ಲಿ ಮಹಿಳೆಯರು ಮೂರ್ತಿಪೂಜೆ ಮಾಡುವುದನ್ನು ನಿಷೇಧಿಸಲು ದೇವಾಲಯದ ಆಡಳಿತ ಮಂಡಳಿಗೆ ಯಾವ ಹಕ್ಕಿದೆ ಎಂದು ಕೇಳಿದೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ಪಿನಾಕಿ ಚಂದ್ರ ಘೋಷ್ ಮತ್ತು ಎನ್ ವಿ ರಮಣಾ ಅವರಿದ್ದ ನ್ಯಾಯಪೀಠ, ಸಂವಿಧಾನಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಹೇಳಿದೆ.
ನಮ್ಮ ದೇಶದಲ್ಲಿ ತಾಯಿಗೆ ಅತ್ಯುನ್ನತ ಸ್ಥಾನ ನೀಡಲಾಗುತ್ತದೆ. ನಮ್ಮಲ್ಲಿ ಮಾತೆಯನ್ನು ಮೊದಲು ಪೂಜಿಸಲಾಗುತ್ತದೆ. ಹಾಗಿರುವಾಗ ದೇವಾಲಯದೊಳಗೆ ಮಹಿಳೆಯರ ಪ್ರವೇಶ ನಿಷೇಧ ಎಷ್ಟು ಸರಿ ಎಂದು ಕೋರ್ಟ್ ಕೇಳಿದೆ.
ಮಸೀದಿಗಳಲ್ಲಿ ಮಹಿಳೆಯರು ಪುರುಷರ ಜೊತೆ ಸಾಲಿನಲ್ಲಿ ನಿಂತು ಪ್ರಾರ್ಥನೆ ಸಲ್ಲಿಸಲು ಬಿಡುತ್ತಾರೆಯೇ ಅಥವಾ ಪ್ರತ್ಯೇಕ ಕೊಠಡಿಗೆ ಹೋಗಲು ಹೇಳುತ್ತಾರೆಯೇ ಎಂದು ನ್ಯಾಯಾಲಯ ಕೇಳಿದೆ. ದೇವರು ಸರ್ವಾಂತರ್ಯಾಮಿ, ಯಾರು ಬೇಕಾದರೂ ದೇವರನ್ನು ಪೂಜಿಸಬಹುದು. ಸಂವಿಧಾನದ ಆಶಯಕ್ಕೆ ತಕ್ಕಂತೆ ಈ ನೆಲದ ಕಾನೂನಿಗೆ ಸರಿಯಾಗಿ ತೀರ್ಪು ನೀಡಲಾಗುವುದು ಎಂದು ಹೇಳಿದೆ.