ಪ್ರಯೋಜನವಿಲ್ಲದ ಸಮ-ಬೆಸ ನಿಯಮಕ್ಕೆ ಪ್ರಚಾರ ಮಾಡುತ್ತಿದ್ದಾರೆ ಕೇಜ್ರಿವಾಲ್: ಶೀಲಾ ದೀಕ್ಷಿತ್

ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಜಾರಿಗೆ ತರಲಾಗಿರುವ ಸಮ-ಬೆಸ ನಿಯಮದಲ್ಲಿ ದೆಹಲಿ ಸರ್ಕಾರ ಏನನ್ನೂ ಮಾಡದಿದ್ದರೂ, ಜನರನ್ನು ಮೂರ್ಖರನ್ನಾಗಿಸಲು ಕೇಜ್ರಿವಾಲ್ ಅವರು ಪ್ರಚಾರವನ್ನು ಮಾಡುತ್ತಿದ್ದಾರೆಂದು...
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ (ಸಂಗ್ರಹ ಚಿತ್ರ)
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ (ಸಂಗ್ರಹ ಚಿತ್ರ)

ನವದೆಹಲಿ: ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಜಾರಿಗೆ ತರಲಾಗಿರುವ ಸಮ-ಬೆಸ ನಿಯಮದಲ್ಲಿ ದೆಹಲಿ ಸರ್ಕಾರ ಏನನ್ನೂ ಮಾಡದಿದ್ದರೂ, ಜನರನ್ನು ಮೂರ್ಖರನ್ನಾಗಿಸಲು ಕೇಜ್ರಿವಾಲ್ ಅವರು ಪ್ರಚಾರವನ್ನು ಮಾಡುತ್ತಿದ್ದಾರೆಂದು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಶುಕ್ರವಾರ ಹೇಳಿದ್ದಾರೆ.

ಸಮ-ಬೆಸ ನಿಯಮ ಯೋಜನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಯೋಜನೆಯಿಂದ ಜನರಿಗಾಗುತ್ತಿರುವ ಪ್ರಯೋಜನವನ್ನು ನಾನೂ ನೋಡಿಲ್ಲ. ಯೋಜನೆಯಿಂದ ಜನರಿಗೆ ಅನಾನುಕೂಲವೇ ಹೆಚ್ಚಾಗಿದೆ. ಪ್ರಾಮಾಣಿಕವಾಗಿ ಯೋಜನೆಯ ಯಶಸ್ಸಿನ ಬಗ್ಗೆ ಚಿಂತಿಸಿದರೆ ಮಾತ್ರ ಯೋಜನೆ ಮುಂದಕ್ಕೆ ಹೋಗಲು ಸಾಧ್ಯ ಎಂದು ಹೇಳಿದ್ದಾರೆ.

ಸರ್ಕಾರ ಯೋಜನೆ ಜಾರಿಗೆ ತರುವುದಕ್ಕೂ ಮುನ್ನ ಜನರಿಗೆ ಪ್ರಯಾಣ ಮಾಡಲು ವ್ಯವಸ್ಥೆ ರೂಪಿಸಬೇಕಿತ್ತು. ಆದರೆ, ಇದಾವುದನ್ನು ಮಾಡದೆಯೇ ಯೋಜನೆಯನ್ನು ಜಾರಿಗೆ ತಂದಿದೆ. ದೆಹಲಿಯಲ್ಲಿರುವ ಅರ್ಧದಷ್ಟು ಸಾರಿಗೆ ಬಸ್ ಗಳು ನಾಶವಾಗಿವೆ. ಹೀಗಿರುವಾಗ ಜನರು ಪ್ರಯಾಣ ಮಾಡಲು ಹೇಗೆ ಸಾಧ್ಯ. ನಿಯಮ ಜಾರಿಯಿಂದ ಜನರಿಗೆ ಸಮಸ್ಯೆ ಹೆಚ್ಚಾಗಿದೆಯೇ ಹೊರತು ಪ್ರಯೋಜನವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಸಮ-ಬೆಸ ನಿಯಮ ಯೋಜನೆ ಕುರಿತಂತೆ ಕೇಜ್ರಿವಾಲ್ ಅವರು ಮಾಡುತ್ತಿರುವ ಪ್ರಚಾರದ ವಿರುದ್ಧ ಕಿಡಿಕಾರಿರುವ ಅವರು, ರಾಜ್ಯದ ಪರಿಸ್ಥಿತಿ ಹೀಗಿರುವಾಗ ಕೇಜ್ರಿವಾಲ್ ಅವರು ಮಾತ್ರ ಪ್ರಪಂಚದಲ್ಲಿ ಈ ರೀತಿಯ ನಿಯಮ ಎಲ್ಲಿಯೂ ಇಲ್ಲ ಎಂಬಂತೆ ಯೋಜನೆ ಯಶಸ್ವಿಯಾಗಿದೆ ಎಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
 
ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಜಾರಿಗೆ ತಂದಿರುವ 2ನೇ ಹಂತದ ಸಮ-ಬೆಸ ನಿಯಮ ಯೋಜನೆ ಇಂದಿನಿಂದ ಜಾರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com