ತ್ರಿಶೂರ್ ಪೂರಂ ನಲ್ಲಿ ಪಟಾಕಿ ಪ್ರದರ್ಶನಕ್ಕೆ ಕೇರಳ ಹೈಕೋರ್ಟ್ ಒಪ್ಪಿಗೆ

ಕೊಲ್ಲಂ ಪಟಾಕಿ ದುರಂತದ ಬಳಿಕ ರಾತ್ರಿ ವೇಳೆ ಪಟಾಕಿಗೆ ನಿಷೇಧ ಹೇರಿದ್ದ ಕೇರಳದಲ್ಲಿ ಇದೀಗ ಮತ್ತೆ ಪಟಾಕಿ ಪ್ರದರ್ಶನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ಪೂರಂ ಉತ್ಸವ ನಡೆಯುವ ತ್ರಿಶೂರ್ ಪೂರಂ ದೇಗುಲ (ಸಂಗ್ರಹ ಚಿತ್ರ)
ಪೂರಂ ಉತ್ಸವ ನಡೆಯುವ ತ್ರಿಶೂರ್ ಪೂರಂ ದೇಗುಲ (ಸಂಗ್ರಹ ಚಿತ್ರ)
Updated on

ತಿರುವನಂತಪುರಂ: ಕೊಲ್ಲಂ ಪಟಾಕಿ ದುರಂತದ ಬಳಿಕ ರಾತ್ರಿ ವೇಳೆ ಪಟಾಕಿಗೆ ನಿಷೇಧ ಹೇರಿದ್ದ ಕೇರಳದಲ್ಲಿ ಇದೀಗ ಮತ್ತೆ ಪಟಾಕಿ ಪ್ರದರ್ಶನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.

ಕೊಲ್ಲಂನ ಪುಟ್ಟಿಂಗಲ್ ದೇವಾಲಯದಲ್ಲಿನ ಪಟಾಕಿ ದುರಂತದಿಂದಾಗಿ 114  ಮಂದಿ ಸಾವನ್ನಪ್ಪಿದ ದುರ್ಘಟನೆ ಹಿನ್ನೆಲೆಯಲ್ಲಿ ತ್ರಿಶೂರ್ ಪೂರಂ ಉತ್ಸವಕ್ಕೆ ಎಲ್ಲಿ ಹೈಕೋರ್ಟ್ ನಿಷೇಧ  ಹೇರುತ್ತದೆ ಎಂಬ ಶಂಕೆ ಎಲ್ಲರಲ್ಲಿಯೂ ವ್ಯಕ್ತವಾಗಿತ್ತು. ತ್ರಿಶೂರ್ ಪೂರಂ ದೇಗುಲದಲ್ಲಿ ಇದೇ ಆಗಸ್ಟ್ 17 ಮತ್ತು 18ರಂದು ನಡೆಯಲಿರುವ ಉತ್ಸವದಲ್ಲಿ ಪಟಾಕಿ ಪ್ರದರ್ಶನ ಮತ್ತು ಆನೆಗಳ  ಮೆರವಣಿಗೆಗೆ ಅನುಮತಿ ಕೋರಿ ದೇವಾಲಯದ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿತ್ತು.  ಅದರಂತೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ದೇವಾಲಯದ ಆಡಳಿತ ಮಂಡಳಿಯ ಆಶ್ವಾಸನೆ ಮೇರೆಗೆ ಪಟಾಕಿ ಪ್ರದರ್ಶನಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.

ಪೂರಂ ಉತ್ಸವವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಾಗಿರುವ ಹಿನ್ನೆಲೆಯಲ್ಲಿ ಪಟಾಕಿಗೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಅನಧಿಕೃತ ರಾಸಾಯನಿಕ ಸ್ಫೋಟಕವನ್ನು ಬಳಸುವಂತಿಲ್ಲ ಮತ್ತು ಶಬ್ದದ ಪ್ರಮಾಣ ಕೂಡ 125 ಡೆಸಿಬಲ್ ಗಿಂತ ಹೆಚ್ಚು ಇರುವಂತಿಲ್ಲ ಎಂದು ನ್ಯಾಯಾಲಯ ಷರತ್ತು  ವಿಧಿಸಿದೆ.

ಆನೆಗಳ ಬಳಕೆಗೆ ಸರ್ಕಾರದ ಅನುಮತಿ
ಇನ್ನು ಖ್ಯಾತ ತ್ರಿಶೂರ್ ಪುರಂ ದೇಗುಲ ಉತ್ಸವದ ಪ್ರಮುಖ ಆಕರ್ಷಣೆ ಆನೆಗಳ ಮೆರವಣಿಗೆಯಾಗಿದ್ದು, ಕೇವಲ ಪಟಾಕಿ ಮಾತ್ರವಲ್ಲದೇ ಆನೆಗಳ ಬಳಕೆಗೂ ಕೇರಳ ಸರ್ಕಾರ ಅನುಮತಿ ನೀಡಿದೆ. ಉತ್ಸವದ ಮೆರವಣಿಗೆ ವೇಳೆ ಆನೆ ಬಳಕೆ ಮೇಲೆ ಹೇರಲಾಗಿದ್ದ ನಿಷೇಧವನ್ನು ರಾಜ್ಯ ಅರಣ್ಯ ಸಚಿವ ತಿರುವಂಚೂರ್ ರಾಧಾಕೃಷ್ಣನ್ ಬುಧವಾರ ಹಿಂಪಡೆದುಕೊಂಡಿದ್ದಾರೆ.

ಉತ್ಸವಕ್ಕೆ ಸರ್ಕಾರದ ಸಹಮತ
ಕೊಲ್ಲಂ ದುರಂತದ ಬಳಿಕ ಉತ್ಸವಗಳ ಮೇಲೆ ನಿಷೇಧ ಹೇರುವ ಕುರಿತು ಸಾಕಷ್ಟು ಒತ್ತಡಗಳು ಬಂದಿದ್ದವು. ಈ ಕುರಿತು ಚರ್ಚಿಸಲು ಸರ್ವಪಕ್ಷಗಳ ಸಭೆ ನಡೆಸಿದ ಕೇರಳ ಮುಖ್ಯಮಂತ್ರಿ  ಊಮನ್ ಚಾಂಡಿ, ಉತ್ಸವಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಪೂರಂ ಉತ್ಸವವನ್ನು ‘ಭೂಮಿ ಮೇಲೆ ಅತ್ಯಂತ ನಯನ ಮನೋಹರ’ ಉತ್ಸವ ಎಂದು ಯುನೆಸ್ಕೋ ಕೂಡ  ಮಾನ್ಯ ಮಾಡಿದೆ. ಹೀಗಾಗಿ ಉತ್ಸವಕ್ಕೆ ತಡೆಯೊಡ್ಡಲು ಕೇರಳ ಸರ್ಕಾರ ನಿರಾಕರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com