ದ್ವಾರಕಾದಲ್ಲಿ ಹೊತ್ತಿ ಉರಿದ ಬೆಂಕಿ: 400ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮ

ದ್ವಾರಕಾದ ಸೆಕ್ಟರ್ 3ರಲ್ಲಿ ನೆಲೆಯೂರಿದ್ದ ಸ್ಲಂ ಜನರ ಸುಮಾರು 400ಕ್ಕೂ ಹೆಚ್ಚು ಗುಡಿಸಲುಗಳು ಬೆಂಕಿಗಾಹುತಿಯಾಗಿರುವ ಘಟನೆ ಶನಿವಾರ ನಡೆದಿದೆ...
ಗುಡಿಸಲು ಕಳೆದುಕೊಂಡ ದುಃಖದಲ್ಲಿರುವ ಯುವಕ
ಗುಡಿಸಲು ಕಳೆದುಕೊಂಡ ದುಃಖದಲ್ಲಿರುವ ಯುವಕ

ನವದೆಹಲಿ: ದ್ವಾರಕಾದ ಸೆಕ್ಟರ್ 3ರಲ್ಲಿ ನೆಲೆಯೂರಿದ್ದ ಸ್ಲಂ ಜನರ ಸುಮಾರು 400ಕ್ಕೂ ಹೆಚ್ಚು ಗುಡಿಸಲುಗಳು ಬೆಂಕಿಗಾಹುತಿಯಾಗಿರುವ ಘಟನೆ ಶನಿವಾರ ನಡೆದಿದೆ.

ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಎಲ್ಲಾ ಕಡೆಗೂ ಬೆಂಕಿ ಆವರಿಸಿಕೊಂಡಿದೆ. ಪರಿಣಾಮ ಆತಂಕಗೊಂಡಿರುವ ಸ್ಥಳೀಯರು ಅಗ್ನಿ ಶಾಮಕ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಂತೆ ಸ್ಥಳಕ್ಕಾಗಿಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಬೆಳಿಗ್ಗೆ 10.08ರ ಸುಮಾರಿಗೆ ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿರುವುದಾಗಿ ಕರೆಬಂದಿತ್ತು. ಇದರಂತೆ ಸ್ಥಳಕ್ಕೆ ಹೋಗಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದೆವು. ಇನ್ನು ಬೆಂಕಿ ಆವರಿಸುತ್ತಿದ್ದಂತೆ ಸ್ಥಳದಲ್ಲಿ ಎರಡು ಸಿಲಿಂಡರ್ ಗಳು ಸ್ಫೋಟಗೊಂಡಿದೆ. ಪ್ರಸ್ತುತ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಬರಲಿದೆ ಎಂದು ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.

ಇನ್ನು ಸ್ಥಳದಲ್ಲಿ 15 ಅಗ್ನಿ ಶಾಮಕ ದಳದ ವಾಹನಗಳು ಕಾರ್ಯಾಚರಣೆ ನಡೆಸುತ್ತಿದ್ದು, ಈ ವರೆಗೂ ಸಾವು-ನೋವುಗಳು ಸಂಭವಿಸಿರುವುದಾಗಿ ಯಾವುದೇ ವರದಿಗಳಾಗಿಲ್ಲ. ಆದರೆ, ಗುಡಿಸಲು ಕಟ್ಟಿಕೊಂಡಿದ್ದ ಸ್ಲಂ ಜನರ ಸಾಕಷ್ಟು ಅಗತ್ಯ ವಸ್ತುಗಳು, ಬಟ್ಟೆಗಳು ಬೆಂಕಿಗಾಹುತಿಯಾಗಿದೆ.

ನಮ್ಮ ಆಹಾರ ಪದಾರ್ಥಗಳು, ಅಗತ್ಯ ವಸ್ತುಗಳು ಹಾಗೂ ಹಣಕಾಸು ಎಲ್ಲವೂ ಬೆಂಕಿಗಾಹುತಿಯಾಗಿದೆ. ಎಲ್ಲಾ ಗುಡಿಸಲುಗಳಿಗೆ ಬೆಂಕಿ ಬಿದ್ದಿದೆ. ಇದೀಗ ನಾವು ನಿರ್ಗತಿಕರಾಗಿದ್ದೇವೆ. ನಮ್ಮ ಎಲ್ಲಾ ಬಟ್ಟೆಗಳು ಬೆಂಕಿಗಾಹುತಿಯಾಗಿದೆ ಎಂದು ಸ್ಲಂನಲ್ಲಿ ನೆಲೆಯೂರಿದ್ದ ವ್ಯಕ್ತಿಯೊಬ್ಬರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೆ, ಅಗ್ಮಿ ಶಾಮಕ ದಳದ ಅಧಿಕಾರಿಗಳ ವಿರುದ್ಧ ಕಿಡಿಕಾರಿರುವ ಅವರು, ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರಲಿಲ್ಲ. ಒಂದೇ ವೇಳೆ ಅವರು ಸರಿಯಾದ ಸಮಯಕ್ಕೆ ಬಂದಿದ್ದರೆ, ಇಷ್ಟೊಂದು ಹಾನಿಯಾಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com