
ನವದೆಹಲಿ: ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡುತ್ತೇವೆಂದು ಸಮ-ಬೆಸ ಯೋಜನೆ ಹೆಸರಿನಲ್ಲಿ ಅನಗತ್ಯ ಜಾಹೀರಾತುಗಳನ್ನು ನೀಡುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜಧಾನಿ ದೆಹಲಿಯನ್ನು ಲೂಟಿ ಮಾಡುತ್ತಿದ್ದಾರೆಂದು ಬಿಜೆಪಿ ಶನಿವಾರ ಆರೋಪ ವ್ಯಕ್ತಪಡಿಸಿದೆ.
ನಿನ್ನೆಯಷ್ಟೇ ಕೇಜ್ರಿವಾಲ್ ಅವರು, ಆಮ್ ಆದ್ಮಿ ಪಕ್ಷ ಜಾರಿಗೆ ತಂದಿರುವ ಸಮ-ಬೆಸ ನಿಯಮವನ್ನು ವಿಫಲವಾಗಬೇಕೆಂದು ಬಿಜೆಪಿ ಬಯಸುತ್ತಿದೆ ಎಂದು ಆರೋಪಿಸಿದ್ದರು.
ಈ ಆರೋಪ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ವಿಜಯ್ ಗೋಯೆಲ್ ಅವರು, ಕೇಜ್ರಿವಾಲ್ ನೇತೃತ್ವದ ಸರ್ಕಾರ ತಾವು ಜಾರಿಗೆ ತಂದಿರುವ ಯೋಜನೆಗಿಂತಲೂ ಅದರ ಜಾಹೀರಾತಿನ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಿದೆ. ಕೇವಲ ರಸ್ತೆಗಳು, ರೇಡಿಯೋ, ಟಿವಿ ಹಾಗೂ ದಿನಪತ್ರಿಕೆಗಳ ಜಾಹೀರಾತುಗಳಿಗಾಗಿಯೇ ಅವರು ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ದೆಹಲಿ ಸರ್ಕಾರ ಜನರ ಹಣವನ್ನು ದುರ್ಬಳಕೆ ಮಾಡಿಕೊಳ್ಳಿತ್ತಿದೆ. ಕೇಜ್ರಿವಾಲ್ ಅವರು ಸಂಚಾರಿ ನಿಯಮ ಹಾಗೂ ಮಾಲಿನ್ಯದ ಕಡೆ ಗಮನ ಹರಿಸುತ್ತಿದ್ದು, ಸಮ-ಬೆಸ ಎಂದು ಹೇಳಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇದೀಗ ಅಧಿಕಾರದಲ್ಲಿರುವ ಸರ್ಕಾರ ಯಾವುದೇ ತಯಾರಿ ಇಲ್ಲದೆಯೇ ರಸ್ತೆಗಿಳಿಯುತ್ತಿದೆ. ನಿಜಕ್ಕೂ ಸಮ-ಬೆಸ ಯಶಸ್ವಿಯಾಗಿರುವುದೇ ಆದರೆ, ಯೋಜನೆಯನ್ನು ಶಾಶ್ವತವಾಗಿ ಏಕೆ ಜಾರಿಗೆ ತರುತ್ತಿಲ್ಲ. ಸಮ-ಬೆಸ ಯೋಜನೆ ಹೆಸರಿನಲ್ಲಿ ಕೇಜ್ರಿವಾಲ್ ಅವರು ಆಟವಾಡುತ್ತಿದ್ದು, ಜಾಹೀರಾತು ಉದ್ದೇಶಕ್ಕಾಗಿ ಮಾತ್ರ 15 ದಿನಕ್ಕೊಮ್ಮೆ ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆಂದು ಹೇಳಿದ್ದಾರೆ.
Advertisement