ತಾಯಿ-ಮಗು ಜೀವ ಉಳಿಸಿದ ಪೊಲೀಸರ ಸಮಯ ಪ್ರಜ್ಞೆ

ಸಮಯ ಪ್ರಜ್ಞೆ ಮೆರೆದ ಪೊಲೀಸರಿಂದಾಗಿ ಮಂಗಳವಾರ ಓರ್ವ ತಾಯಿ ಮತ್ತು ಮಗುವಿನ ಜೀವ ಉಳಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ...
ರಸ್ತೆಯಲ್ಲೇ ಹೆರಿಗೆ ಮಾಡಿಸಿದ ಹೈದರಾಬಾದ್ ಪೊಲೀಸರು (ಎಕ್ಸ್ ಪ್ರೆಸ್ ಫೋಟೋ)
ರಸ್ತೆಯಲ್ಲೇ ಹೆರಿಗೆ ಮಾಡಿಸಿದ ಹೈದರಾಬಾದ್ ಪೊಲೀಸರು (ಎಕ್ಸ್ ಪ್ರೆಸ್ ಫೋಟೋ)

ಹೈದರಾಬಾದ್: ಸಮಯ ಪ್ರಜ್ಞೆ ಮೆರೆದ ಪೊಲೀಸರಿಂದಾಗಿ ಮಂಗಳವಾರ ಓರ್ವ ತಾಯಿ ಮತ್ತು ಮಗುವಿನ ಜೀವ ಉಳಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ತುಂಬು ಗರ್ಭಿಣಿ ಮಹಿಳೆಯೊಬ್ಬಳು ನಡು ರಸ್ತೆಯಲ್ಲೇ ನೋವಿನಿಂದ ಒದ್ದಾಡುತ್ತಿದ್ದಾಗ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹೈದರಾಬಾದ್ ಪೊಲೀಸರು ರಸ್ತೆಬದಿಯಲ್ಲೇ ಮಹಿಳೆಗೆ ಹೆರಿಗೆ ಮಾಡಿ ತಾಯಿ ಮತ್ತು ಮಗುವಿನ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ. ಹೈದರಾಬಾದಿನ ಜನನಿಭಿಡ ನಾರಾಯಣ ಗೂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹೆರಿಗೆ ಬಳಿಕ ತಾಯಿ ಮತ್ತು ಮಗುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಸ್ತುತ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಮಹಿಳೆಯ ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ.

ಘಟನೆ ವಿವರ:
ನಾರಾಯಣಗೂಡ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಭೀಮ್ ರೆಡ್ಡಿ ಅವರಿಗೆ ನಿನ್ನೆ ಸ್ಥಳೀಯರೊಬ್ಬರು ಕರೆ ಮಾಡಿ, ನಡು ರಸ್ತೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬಳು ಬಿದ್ದಿರುವ ಕುರಿತು ಮಾಹಿತಿ  ನೀಡಿದ್ದಾರೆ. ಕೂಡಲೇ ಪೊಲೀಸ್ ಅಧಿಕಾರಿ ಭೀಮ್ ರೆಡ್ಡಿ ಅವರು ಘಟನಾ ಸ್ಥಳಕ್ಕೆ ನಾಲ್ಕು ಮಹಿಳಾ ಪೇದೆಗಳು ಹಾಗೂ ಇಬ್ಬರು ಪುರುಷ ಪೇದೆಗಳನ್ನು ತುರ್ತಾಗಿ ರವಾನಿಸಿದ್ದಾರೆ. ಸ್ಥಳಕ್ಕೆ  ಧಾವಿಸಿದ ಮಹಿಳಾ ಪೇದೆಗಳು ಮಹಿಳೆಯನ್ನು ಪರಿಶೀಲಿಸಿದಾಗ ಆಕೆ ತುಂಬು ಗರ್ಭಿಣಿಯಾಗಿದ್ದು, ಯಾವುದೇ ಕ್ಷಣದಲ್ಲಿ ಹೆರಿಗೆಯಾಗಬಹುದು ಎಂದು ತಿಳಿದುಕೊಂಡಿದ್ದಾರೆ. ಅಂತೆಯೇ  ಆ್ಯಂಬುಲೆನ್ಸ್ ಗೆ ಕರೆ ಮಾಡಿದರೂ, ಸರ್ಕಾರಿ ಆಸ್ಪತ್ರೆ ಘಟನಾ ಪ್ರದೇಶದಿಂದ ಸುಮಾರು 3 ಕಿ.ಮೀ ದೂರದಲ್ಲಿದ್ದು, ಆ್ಯಂಬುಲೆನ್ಸ್ ಬರುವ ವೇಳೆ ಹೆರಿಗೆಯಾಗುವ ಅಪಾಯವಿತ್ತು.

ಹೀಗಾಗಿ ಮಹಿಳಾ ಪೊಲೀಸರೇ ಸೂಲಗಿತ್ತಿಯಾರಾಗಿ ಮಾರ್ಪಟ್ಟು ಸ್ಥಳೀಯರ ನೆರವಿನೊಂದಿಗೆ ರಸ್ತೆ ಬದಿಯಲ್ಲೇ ಸೀರೆಗಳನ್ನು ಮರಕ್ಕೆ ಕಟ್ಟುವ ಮೂಲಕ ಮಹಿಳೆಗೆ ಪೊಲೀಸರು ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಪ್ರಸ್ತುತ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಆಸ್ಪತ್ರೆ ಮೂಲಗಳ  ಪ್ರಕಾರ ತಾಯಿ ಮತ್ತು ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.

ಹೈದರಾಬಾದ್ ಪೊಲೀಸರು ತೋರಿದ ಈ ಸಮಯ ಪ್ರಜ್ಞೆಯಿಂದಾಗಿ ಇಂದು ತಾಯಿ ಮತ್ತು ಮಗು ಬದುಕುಳಿದಿದ್ದು, ಪೊಲೀಸರ ಈ ಕಾರ್ಯ ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com