ಎಫ್-16 ಯುದ್ಧ ವಿಮಾನ (ಸಂಗ್ರಹ ಚಿತ್ರ)
ಎಫ್-16 ಯುದ್ಧ ವಿಮಾನ (ಸಂಗ್ರಹ ಚಿತ್ರ)

ಪಾಕ್ ಎಫ್-16 ಕನಸಿಗೆ ಬಿತ್ತು ಕೊಕ್ಕೆ; ಸಬ್ಸಿಡಿಗೆ ಕತ್ತರಿ ಹಾಕಿದ ಅಮೆರಿಕ ಪಾರ್ಲಿಮೆಂಟ್

ಅಮೆರಿಕದ ಅತ್ಯಾಧುನಿಕ ಎಫ್16 ಯುದ್ಧ ವಿಮಾನವನ್ನು ಖರೀದಿಸುವ ಕನಸು ಕಾಣುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಪಾರ್ಲಿಮೆಂಟ್ ಅಡ್ಡಿಯಾಗಿದ್ದು, ಖರೀದಿ ಒಪ್ಪಂದದಲ್ಲಿ ಪಾಕಿಸ್ತಾನಕ್ಕೆ ನೀಡಬೇಕಿದ್ದ ಸಬ್ಸಿಡಿಗೆ ಕತ್ತರಿ ಹಾಕಿದೆ...

ವಾಷಿಂಗ್ಟನ್: ಅಮೆರಿಕದ ಅತ್ಯಾಧುನಿಕ ಎಫ್16 ಯುದ್ಧ ವಿಮಾನವನ್ನು ಖರೀದಿಸುವ ಕನಸು ಕಾಣುತ್ತಿದ್ದ ಪಾಕಿಸ್ತಾನಕ್ಕೆ ಅಮೆರಿಕ ಪಾರ್ಲಿಮೆಂಟ್ ಅಡ್ಡಿಯಾಗಿದ್ದು, ಖರೀದಿ ಒಪ್ಪಂದದಲ್ಲಿ  ಪಾಕಿಸ್ತಾನಕ್ಕೆ ನೀಡಬೇಕಿದ್ದ ಸಬ್ಸಿಡಿಗೆ ಕತ್ತರಿ ಹಾಕಿದೆ.

ಸಬ್ಸಿಡಿ ದರದಲ್ಲಿ ಪಾಕಿಸ್ತಾನಕ್ಕೆ 8 ಎಫ್ 16 ಯುದ್ಧ ವಿಮಾನವನ್ನು ನೀಡಲು ಒಪ್ಪಿಗೆ ನೀಡಿದ್ದ ಅಮೆರಿಕ ಈಗ ತನ್ನ ನಿಲವು ಬದಲಿಸಿದ್ದು, ಪಾಕಿಸ್ತಾನಕ್ಕೆ ನೀಡಿದ್ದ ಭಾರಿ ಪ್ರಮಾಣದ ಸಬ್ಸಿಡಿಯನ್ನು  ಕೈಬಿಟ್ಟಿದೆ. ಅಮೆರಿಕ ಪಾರ್ಲಿಮೆಂಟ್ ನಲ್ಲಿ ಈ ಬಗ್ಗೆ ನಿರ್ಣಯಕೈಗೊಳ್ಳಲಾಗಿದ್ದು, ಅಮೆರಿಕ ಪಾರ್ಲಿಮೆಂಟ್ ನ ನಿರ್ಧಾರದಿಂದಾಗಿ ಪಾಕಿಸ್ತಾನ ಸರ್ಕಾರ ಇದೀಗ ಪೇಚಿಗೆ ಸಿಲುಕಿದೆ. ಸಬ್ಸಿಡಿಗೆ ಕತ್ತರಿ  ಬಿದ್ದ ಹಿನ್ನಲೆಯಲ್ಲಿ ಇದೀಗ ಪಾಕಿಸ್ತಾನ ಸರ್ಕಾರ ಒಪ್ಪಂದದ ಮೂಲದರಕ್ಕಿಂತ ದುಪ್ಪಟ್ಟು ಹಣ ನೀಡಿ ಎಫ್-16 ಯುದ್ಧ ವಿಮಾನಗಳನ್ನು ಖರೀದಿ ಮಾಡುವ ಅನಿವಾರ್ಯತೆ ಎದುರಾಗಿದೆ.

ಉಗ್ರ ನಿಗ್ರಹ ಕಾರ್ಯಾಚರಣೆಗೆ ಪಾಕಿಸ್ತಾನ ಸೇನೆಗೆ ನೆರವಾಗಲಿ ಎಂಬ ಕಾರಣಕ್ಕೆ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ಎಫ್ 16 ಯುದ್ಧ ವಿಮಾನವನ್ನು ಮಾರಾಟ ಮಾಡಲು  ಮುಂದಾಗಿದೆಯಾದರೂ, ಇತ್ತೀಚೆಗೆ ಅಮೆರಿಕ ಚಿಂತಕರ ಛಾವಡಿಯಲ್ಲಿ ಪಾಕಿಸ್ತಾನ ಎಫ್ 16 ಯುದ್ಧ ವಿಮಾನವನ್ನು ಭಾರತದ ವಿರುದ್ಧವೇ ಪ್ರಯೋಗಿಸುವ ಸಾಧ್ಯತೆ ಕುರಿತು ಆಂತಕ  ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಇದೀಗ ಅಮೆರಿಕ ಒಪ್ಪಂದವನ್ನು ಮುಂದುವರೆಸುವ ಕುರಿತು ಮರು ಚಿಂತನೆಯಲ್ಲಿ ತೊಡಗಿದೆ. ಇದರ ಮೊದಲ ಹಂತ ಎನ್ನುವಂತೆ ನಿನ್ನೆ ಅಮೆರಿಕ ಸಂಸತ್ತು ಸಬ್ಸಿಡಿಗೆ  ಕತ್ತರಿ ಹಾಕಿದ್ದು, ಅಮೆರಿಕ-ಪಾಕಿಸ್ತಾನದ ನಡುವಿನ ಎಫ್ 16 ಯುದ್ಧ ವಿಮಾನ ಖರೀದ ಒಪ್ಪಂದ ಇದೀಗ ಡೋಲಾಯಮಾನ ಸ್ಥಿತಿಯಲ್ಲಿದೆ.

ದುಬಾರಿ ಹಣ ನೀಡಿ ವಿಮಾನ ಖರೀದಿಸುವ ಶಕ್ತಿ ಪಾಕಿಸ್ತಾನಕ್ಕಿಲ್ಲ
ಇನ್ನು ಅಮೆರಿಕ ಸಂಸತ್ತು ಸಬ್ಸಿಡಿಗೆ ಕತ್ತರಿ ಹಾಕಿರುವ ಹಿನ್ನಲೆಯಲ್ಲಿ ಎಫ್ 16 ಯುದ್ಧ ವಿಮಾನವನ್ನು ಪಾಕಿಸ್ತಾನ ದುಪ್ಪಟ್ಟು ಹಣ ನೀಡಿ ಖರೀದಿಸಬೇಕಿದೆ. ಆದರೆ ಪ್ರಸ್ತುತ ಪಾಕಿಸ್ತಾನದ ರಕ್ಷಣಾ  ಇಲಾಖೆಯ ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿರುವ ತಜ್ಞರು ಪಾಕಿಸ್ತಾನದಿಂದ ಎಫ್16 ವಿಮಾನ ಖರೀದಿಸಲು ಕಷ್ಟ ಸಾಧ್ಯವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಾಷಿಂಗ್ಟನ್ ನಲ್ಲಿರುವ ಪಾಕಿಸ್ತಾನದ ರಾಯಭಾರಿ ನದೀಮ್ ಹೊತಿಯಾನ ಅವರು, ಶಸ್ತ್ರಾಸ್ತ್ರ ಖರೀದಿ ಪ್ರಕ್ರಿಯೆ ಒಂದು ಸುದೀರ್ಘ ವ್ಯವಹಾರವಾಗಿದ್ದು, ಅದರ ಪ್ರಸ್ತುತ  ಸ್ಥಿತಿಗತಿ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ಉಗ್ರರ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಈ ಎಫ್ 16 ಯುದ್ಧ ವಿಮಾನ ಪಾಕಿಸ್ತಾನದ ಬಲ ಹೆಚ್ಚಿಸಲಿದೆ. ಈ  ನಿಟ್ಟಿನಲ್ಲಿ ಅಮೆರಿಕ-ಪಾಕಿಸ್ತಾನ ದೇಶಗಳು ಒಟ್ಟಾಗಿ ಕೈಜೋಡಿಸಬೇಕು’ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com