

ನವದೆಹಲಿ: ಆಗಸ್ಟವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದ ಕುರಿತಂತೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರ ಮುಂದುವರಿದಿದ್ದು, ವಂಚನೆ ಮತ್ತು ಕಪ್ಪುಪಟ್ಟಿಗೆ ಸೇರಿದ ಕಂಪೆನಿಯನ್ನು 2014ರ ರಕ್ಷಣಾ ಒಪ್ಪಂದದಲ್ಲಿ ಭಾಗವಹಿಸಲು ಯಾಕೆ ಅವಕಾಶ ನೀಡಲಾಯಿತು ಎಂದು ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿಯನ್ನು ಕೇಳಿದೆ.
ಆದರೆ ಈ ಆರೋಪವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ನಿರಾಕರಿಸಿದ್ದಾರೆ. ಅವರು 2014ರ ಮೇಯಿಂದ ನವೆಂಬರ್ ವರೆಗೆ ರಕ್ಷಣಾ ಖಾತೆಯನ್ನು ವಹಿಸಿಕೊಂಡಿದ್ದರು. ಅಗಸ್ಟವೆಸ್ಟ್ ಲ್ಯಾಂಡ್ ಕಂಪೆನಿಯ ಮೂಲ ಕಂಪೆನಿಯಾದ ಫಿನ್ಮೆಕ್ಕಾನಿಕಾ ಕಂಪೆನಿಯನ್ನು ಹಿಂದಿನ ಯುಪಿಎ ಸರ್ಕಾರ ಯಾವತ್ತೂ ಕಪ್ಪು ಪಟ್ಟಿಗೆ ಸೇರಿಸಿರಲಿಲ್ಲ ಎಂದರು.
ತಿರುವನಂತಪುರದಲ್ಲಿ ನಿನ್ನೆ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿದ್ದ ಕಂಪೆನಿಯನ್ನು ಎನ್ ಡಿಎ ಸರ್ಕಾರ ತೆಗೆದು ಹಾಕಿತು ವಿತರಣೆ ಮಾಡಿತು ಎಂಬ ಆರೋಪವನ್ನು ಅವರು ತಳ್ಳಿಹಾಕಿತು ಮತ್ತು ಆರೋಪ ಸತ್ಯಕ್ಕೆ ದೂರವಾದದ್ದು ಎಂದರು.
ಅಗಸ್ಟವೆಸ್ಟ್ ಲ್ಯಾಂಡ್ ಕಂಪೆನಿಯ ಮೂಲ ಕಂಪೆನಿಯಾದ ಫಿನ್ಮೆಕ್ಕಾನಿಕಾ ವನ್ನು ಯುಪಿಎ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಿತ್ತು ಎಂದು ಅಂದಿನ ರಕ್ಷಣಾ ಸಚಿವ ಎ.ಕೆ.ಆಂಟನಿಯವರು ಹೇಳುತ್ತಾರೆ. ಅಂತಹ ಯಾವುದೇ ಘಟನೆ ನಡೆದಿಲ್ಲ. ಅವರು ನೆನಪು ಶಕ್ತಿ ಕೊರತೆಯಿಂದ ಬಳಲುತ್ತಿರಬೇಕು ಎಂದರು.
ಆಂಟನಿಯವರ ಹೇಳಿಕೆಗೆ ತಕರಾರು ವ್ಯಕ್ತಪಡಿಸಿದ ಅವರು, 2014 ಮೇ 12ರಂದು ಅಂದಿನ ರಕ್ಷಣಾ ಸಚಿವ ಎ.ಕೆ.ಆಂಟನಿಯವರು ಆದೇಶವೊಂದನ್ನು ಹೊರಡಿಸಿ ಫಿನ್ಮೆಕ್ಕಾನಿಕಾ ಕಂಪೆನಿ ಜೊತೆಗೆ ಎಲ್ಲಾ ಒಪ್ಪಂದವನ್ನು ರದ್ದುಪಡಿಸುವಂತೆ ಸೂಚಿಸಿದ್ದರು. ಲೋಕಸಭಾ ಚುನಾವಣೆಯ ಫಲಿತಾಂಶ ಮೇ 16ರಂದು ಹೊರಬಂದು ಇಂದಿನ ಮೋದಿ ಸರ್ಕಾರ ಮೇ 26ರಂದು ಅಧಿಕಾರ ಸ್ವೀಕರಿಸಿಕೊಂಡಿತು. ಹಾಗಾಗಿ ಆಂಟನಿಯವರ ಆದೇಶ ಹೊರಬರಲಿಲ್ಲ. ನಂತರ ರಕ್ಷಣಾ ಖಾತೆ ಸಚಿವನಾಗಿ ನಾನು ಕಂಪೆನಿಯೊಂದಿಗೆ ಎಲ್ಲಾ ಒಪ್ಪಂದಗಳನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿದೆ. ಆದರೆ ರಕ್ಷಣಾ ಸಿದ್ಧತೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಹಳೆ ಪೂರೈಕೆಗಳನ್ನು ಭಾರತಕ್ಕೆ ರವಾನಿಸಲು ಅವಕಾಶ ನೀಡಲಾಯಿತು.ಮತ್ತೆ ಭವಿಷ್ಯದ ಒಪ್ಪಂದಗಳನ್ನು ತಡೆಹಿಡಿಯಲಾಯಿತು ಎಂದು ಹೇಳಿದರು.
ಈ ನಡುವೆ ವಿವಿಐಪಿಗಳ 750 ದಶಲಕ್ಷ ಡಾಲರ್ ಒಪ್ಪಂದದ ಬಗ್ಗೆ ವಿವರಣೆ ನೀಡುವಂತೆ ಸಿಬಿಐ ನಿನ್ನೆ ಏರ್ ಮಾರ್ಷಲ್ (ನಿವೃತ್ತ) ಜೆ.ಎಸ್. ಗಿಜ್ರಾಲ್ ಅವರನ್ನು ಪ್ರಶ್ನೆ ಮಾಡಿ ಮಾಹಿತಿ ತೆಗೆದುಕೊಂಡಿದೆ.