ಕೊಲ್ಹಾಪುರ: ಮದುವೆ ಸ್ವರ್ಗದಲ್ಲಿ ನಡೆಯುತ್ತೆ ಅಂತಾರೆ. ಆದರೆ ಇಲ್ಲೊಂದು ಜೋಡಿ ನೆಲದಿಂದ ಸಾವಿರ ಅಡಿ ಎತ್ತರದಲ್ಲಿ ಮದುವೆಯಾಗಿದ್ದಾರೆ.
ಇದು ನಡೆದಿದ್ದು ನಿನ್ನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ. ಮದುಮಗ ಮತ್ತು ಮದುಮಗಳು ಮರಾಠಿ ಶೈಲಿಯಲ್ಲಿ ಉಡುಪು ಧರಿಸಿ ಸೊಂಟಕ್ಕೆ ಗಟ್ಟಿಯಾಗಿ ಹಗ್ಗ ಕಟ್ಟಿಕೊಂಡು ರೋಪ್ ವೇ ಮೂಲಕ ಆಳವಾದ ಕಣಿವೆ ಪ್ರದೇಶದಿಂದ ಸಾವಿರ ಅಡಿ ಎತ್ತರಕ್ಕೆ ಹೋಗಿ ನೇತಾಡಿಕೊಂಡು ಹೂ ಹಾರ ಬದಲಾಯಿಸಿಕೊಂಡಿದ್ದಾರೆ.
ಪುರೋಹಿತರು ಮಂತ್ರ ಘೋಷಿಸುತ್ತಿದ್ದಂತೆ ಹುಡುಗ-ಹುಡುಗಿ ಇಬ್ಬರೂ ವಚನ ಹೇಳುತ್ತಾ ಹಾರ ಬದಲಿಸಿಕೊಂಡು ಮದುವೆ ಶಾಸ್ತ್ರ ಮುಗಿಸಿಕೊಂಡರು.
ಈ ವಿಶೇಷ ಮದುವೆಯನ್ನು ನೋಡಲು ಅಲ್ಲಿ ನೂರಾರು ಜನ ಸೇರಿದ್ದರು. ಮದುವೆಗೆ ಆಗಮಿಸಿದ್ದ ಅತಿಥಿಗಳಿಗೂ ಇದನ್ನು ನೋಡಿ ಖುಷಿಯಾಯಿತು. ಮದುವೆ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸಂತೋಷಪಡಿಸಲು ರನ್ನಿಂಗ್ ಕಮೆಂಟರಿ ಕೂಡ ಇತ್ತು.
ಹುಡುಗ-ಹುಡುಗಿಯಿಬ್ಬರೂ ಟ್ರೆಕ್ಕಿಂಗ್ ಉತ್ಸಾಹಿಗಳಾಗಿರುವುದರಿಂದ ಅವರ ಕುಟುಂಬದವರು ಮತ್ತು ಹತ್ತಿರದ ಬಂಧುಗಳಿಗೆ ಇವರ ಮದುವೆ ಶೈಲಿ ವಿಶೇಷವೆನಿಸಲಿಲ್ಲ. ಇಬ್ಬರೂ ಟ್ರೆಕ್ಕಿಂಗ್ ಪ್ರವಾಸ ಸಂದರ್ಭದಲ್ಲಿ ಭೇಟಿಯಾಗಿ ಪರಿಚಿತರಾಗಿ ಒಬ್ಬರಿಗೊಬ್ಬರು ಪ್ರೀತಿಸತೊಡಗಿದ್ದರು.