
ಮುಂಬೈ: ಮುಂಬೈ-ಗೋವಾ ಹೆದ್ದಾರಿ ಸೇತುವೆ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ 22 ಮಂದಿಯ ಪೈಕಿ 2 ಶವಗಳು ಪತ್ತೆಯಾಗಿದ್ದು, ನಾಪತ್ತೆಯಾದ ಉಳಿದ 20 ಮಂದಿಯ ರಕ್ಷಣೆಗಾಗಿ ವ್ಯಾಪಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮುಂಬೈನಿಂದ ಸುಮಾರು 84 ಕಿ.ಮೀ ದೂರದಲ್ಲಿರುವ ರಾಯಗಡ ಜಿಲ್ಲೆಯ ಸಮೀಪದಲ್ಲಿರುವ ಬ್ರಿಟೀಷ್ ಕಾಲದ ಮೇಲ್ಸೇತುವೆ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಕಳೆದ ರಾತ್ರಿ ಕುಸಿದುಬಿದ್ದಿತ್ತು. ಈ ವೇಳೆ ಸೇತುವೆ ಚಲಿಸುತ್ತಿದ್ದ ಎರಡು ಬಸ್ ಹಾಗೂ 4 ಕಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಪ್ರಾಥಮಿಕ ಮಾಹಿತಿ ಪ್ರಕಾರ ಈ 6 ವಾಹನಗಳಲ್ಲಿ ಒಟ್ಟು 22 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ಪೈಕಿ ಇಂದು ಬೆಳಗ್ಗೆ 2 ಶವಗಳು ಪತ್ತೆಯಾಗಿದ್ದು, ನಾಪತ್ತೆಯಾದ ಇನ್ನುಳಿದ 20 ಮಂದಿಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ. ಶೋಧ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ನೆರವು ನೀಡಿದ್ದು, 50ಕ್ಕೂ ಹೆಚ್ಚು ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿಗಳನ್ನು ತುರ್ತಾಗಿ ರವಾನಿಸಿದೆ. ಅಲ್ಲದೆ ಹತ್ತಾರು ಮುಳುಗು ತಜ್ಞರು, 20ಕ್ಕೂ ಹೆಚ್ಚು ಯಾಂತ್ರಿಕ ಬೋಟ್ ಗಳು ಹಾಗೂ ನೌಕಾಪಡೆಯ ಎರಡು ಹೆಲಿಕಾಪ್ಟರ್ ಶೋಧ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ. ಇದಲ್ಲದೆ ಲಘು ಚೇತಕ್ ಹೆಲಿಕಾಪ್ಟರ್ ಕೂಡ ಶೋಧಕಾರ್ಯದಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.
ದೇವೇಂದ್ರ ಫಡ್ನವಿಸ್ ಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ಇದೇ ವೇಳೆ ಕಳೆದ ರಾತ್ರಿ ಸಂಭವಿಸಿದ ದುರಂತದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಅಲ್ಲದೆ ರಕ್ಷಣಾ ಕಾರ್ಯಾಚರಣೆ ನಿಮಿತ್ತ ಕೇಂದ್ರ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ. ಅಂತೆಯೇ ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿಗಳನ್ನು ಕೂಡ ಮಹಾರಾಷ್ಟ್ರಕ್ಕೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement