ಪದ್ಮನಾಭ ಸ್ವಾಮಿ ದೇಗುಲದಲ್ಲಿ ರು.186 ಕೋಟಿ ಚಿನ್ನ ನಾಪತ್ತೆ

ವಿಶ್ ವಪ್ರಸಿದ್ಧ ಕೇರಳದ ತಿರುವನಂತಪುರ ಜಿಲ್ಲೆಯ ಶ್ರೀ ಪದ್ಮನಾಭ ಸ್ವಾಮಿ ದೇಗುಲದಲ್ಲಿ ರು.186 ಕೋಟಿ ಮೌಲ್ಯದ ಚಿನ್ನ ನಾಪತ್ತೆಯಾಗಿದೆ ಎಂದು ವಿಶೇಷ ಸಮಿತಿ ತನ್ನ ವರದಿಯಲ್ಲಿ...
ಕೇರಳದ ತಿರುವನಂತಪುರ ಜಿಲ್ಲೆಯ ಶ್ರೀ ಪದ್ಮನಾಭ ಸ್ವಾಮಿ ದೇಗುಲ
ಕೇರಳದ ತಿರುವನಂತಪುರ ಜಿಲ್ಲೆಯ ಶ್ರೀ ಪದ್ಮನಾಭ ಸ್ವಾಮಿ ದೇಗುಲ

ನವದೆಹಲಿ: ವಿಶ್ವಪ್ರಸಿದ್ಧ ಕೇರಳದ ತಿರುವನಂತಪುರ ಜಿಲ್ಲೆಯ ಶ್ರೀ ಪದ್ಮನಾಭ ಸ್ವಾಮಿ ದೇಗುಲದಲ್ಲಿ ರು.186 ಕೋಟಿ ಮೌಲ್ಯದ ಚಿನ್ನ ನಾಪತ್ತೆಯಾಗಿದೆ ಎಂದು ವಿಶೇಷ ಸಮಿತಿ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

ಈ ಹಿಂದೆ ಪದ್ಮನಾಭ ಸ್ವಾಮಿ ದೇಗುಲದ ಹಣಕಾಸು ವ್ಯವಹಾರಗಳ ಬಗ್ಗೆ ವರದಿ ಸಲ್ಲಿಸುವಂತೆ 2015ರ ಅಕ್ಟೋಬರ್ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ವಿನೋದ್ ರೈ ಅವರ ಸಮಿತಿಗೆ ಆದೇಶಿಸಿತ್ತು.

ಇದರಂತೆ ಪರಿಶೀಲನೆ ನಡೆಸಿರುವ ರೈ ನೇತೃತ್ವದ ವಿಶೇಷ ಸಮಿತಿ ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದು, ಚಿನ್ನ ನಾಪತ್ತೆಯೊಂದಿಗೆ ದೇವಾಲಯದ ಹಣಕಾಸು ವಹಿವಾಟಿನಲ್ಲಿಯೂ ಹಲವಾರು ಲೋಪದೋಷಗಳಾಗಿರುವುದಾಗಿ ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಈ ಕುರಿತ ವರದಿಯನ್ನು ಈಗಾಗಲೇ ಸಮಿತಿ ಅಧಿಕಾರಿಗಳಿಗೆ ಸಲ್ಲಿಸಿದೆ. ಸಮಿತಿ ಸಲ್ಲಿಸಿರುವ ವರದಿಯು ಸುಮಾರು 2 ಸಂಪುಟಗಳಿದ್ದು, ಇವುಗಳನ್ನು ಸಾವಿರ ಪುಟಗಳ ಐದು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ದೇವಾಲಯಕ್ಕೆ ಸೇರಿದ ಚಿನ್ನವನ್ನು ಶುದ್ಧಗೊಳಿಸುವ ನೆಪದಲ್ಲಿ 263 ಚಿನ್ನಾಭರಣಗಳು ನಾಪತ್ತೆಯಾಗಿವೆ. ರು.186 ಕೋಟಿ ಮೌಲ್ಯದ 769 ಚಿನ್ನದ ಬಿಂದಿಗೆಗಳು ಕಳೆದುಹೋಗಿವೆ. ಈ ಲೋಪದೋಷಗಳನ್ನು ಗಮನದಲ್ಲಿಟ್ಟುಕೊಂಡು ನಾಪತ್ತೆಯಾಗಿರುವ ಚಿನ್ನಾಭರಣಗಳ ಕುರಿತಂತೆ ತನಿಖೆ ನಡೆಸುವ ಅಗತ್ಯವಿದೆ ಎಂದು ಸಮಿತಿ ವರದಿಯಲ್ಲಿ ಹೇಳಿಕೊಂಡಿದೆ.

ಇನ್ನು ಕಾಣಿಕೆ ಎಣಿಸುವಿಕೆಯಲ್ಲಿಯೂ ಸಾಕಷ್ಟು ಅವ್ಯವಹಾರಗಳು ಕಂಡುಬಂದಿದ್ದು,  ರು.14.18 ಲಕ್ಷದ ಚಿನ್ನ ಮತ್ತು ಬೆಳ್ಳಿಯ ಬಗ್ಗೆ ನಡವರವ್ ನೋಂದಣಿ ಪುಸ್ತಕದಲ್ಲಿ ಉಲ್ಲೇಖ ಮಾಡಿಲ್ಲ. ಇದರಂತೆ ದೇಗುಲದಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿರುವುದಾಗಿ ಸಮಿತಿ ತನ್ನ ವರದಿಯಲ್ಲಿ ಹೇಳಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಇದಲ್ಲದೆ, ರು.14 ಲಕ್ಷ ಮೌಲ್ಯದ ಬೆಳ್ಳಿ ಗಟ್ಟಿ ನಾಪತ್ತೆಯಾಗಿದ್ದು, 1970ರಲ್ಲಿ ದೇಗುಲದ ಆಡಳಿತ ಮಂಡಳಿ 2.11 ಎಕರೆ ಭೂಮಿಯನ್ನು ಮಾರಾಟ ಮಾಡಿದೆ. ಆದರೆ, ಈ ಬಗ್ಗೆ ಯಾವುದೇ ರೀತಿಯ ದಾಖಲೆಗಳು ಲಭ್ಯವಾಗಿಲ್ಲ. ಇದು ಅಕ್ರಮ ಮಾರಾಟವಾಗಿದೆ ಎಂದು ಹೇಳಿಕೊಂಡಿದೆ.

ಇತ್ತೀಚೆಗೆ ದೇವಾಲಯದ ಖರ್ಚು ವೆಚ್ಚಗಳು ಹೆಚ್ಚಾಗಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಸಮಿತಿ, ಕೆಲವು ವರ್ಷಗಳಿಂದೀಚೆಗೆ ದೇವಾಲಯದಲ್ಲಿ ಅವ್ಯವಹಾರಗಳು ನಡೆದು ಬರುತ್ತಿವೆ. ಇನ್ನು ದೇಗುಲದ ಆಡಳಿತ ವ್ಯವಸ್ಥೆಯಲ್ಲಿಯೂ ಸಾಕಷ್ಟು ಬದಲಾವಣೆಯನ್ನು ಮಾಡಲಾಗಿದೆ. ದೇವಾಲಯದ ಭದ್ರತಾ ವ್ಯವಸ್ಥೆಯಲ್ಲಿಯೂ ಬದಲಾವಣೆಯನ್ನು ಮಾಡಲಾಗಿದೆ ಎಂದು ತಿಳಿಸಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com