

ಚೆನ್ನೈ: ಕರ್ನಾಟಕ ಬಿಡಬೇಕಿರುವ ಕಾವೇರಿ ನದಿ ನೀರಿನ ಪಾಲನ್ನು ಪಡೆದುಕೊಳ್ಳಲು ಇನ್ನು ಒಂದೆರಡು ದಿನಗಳಲ್ಲಿ ಸುಪ್ರೀಂ ಕೋರ್ಟ್‌ಗೆ ದೂರು ಸಲ್ಲಿಸಲಾಗುವುದು ಎಂದು ತಮಿಳುನಾಡು ಸರ್ಕಾರ ಹೇಳಿದೆ.
ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶದ ಪ್ರಕಾರ ತಮಿಳುನಾಡಿಗೆ ಬಿಡಬೇಕಾಗಿದ್ದ ನೀರನ್ನು ಇದವರೆಗೂ ಕರ್ನಾಟಕ ಬಿಟ್ಟಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕದಿಂದ ನಮ್ಮ ಪಾಲಿನ ನೀರನ್ನು ಪಡೆದುಕೊಳ್ಳುವ ವಿಶ್ವಾಸ ಇದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ.
ನ್ಯಾಯಮಂಡಳಿ ಆದೇಶ ಪ್ರಕಾರ ಜೂನ್ ಮತ್ತು ಜುಲೈ ತಿಂಗಳಲ್ಲಿ ಬಿಡಬೇಕಿದ್ದ ನೀರನ್ನು ಕರ್ನಾಟಕ ಬಿಟ್ಟಿಲ್ಲ. ಕಾವೇರಿ ನೀರು ಬಿಡುವಂತೆ ಕರ್ನಾಟಕ ಮತ್ತು ಕೇಂದ್ರಕ್ಕೆ ಬರೆದ ಪತ್ರಗಳಿಗೂ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೇಕೆದಾಟಿನಲ್ಲಿ ಅಣೆಕಟ್ಟೆ ನಿರ್ಮಿಸುವ ಕರ್ನಾಟಕದ ನಿರ್ಧಾರದ ಬಗ್ಗೆ ತಮಿಳುನಾಡು ರೈತರು ಚಿಂತಿತರಾಗಿದ್ದಾರೆ. ಒಂದು ವೇಳೆ ಕರ್ನಾಟಕ ಸರ್ಕಾರ ಅಣೆಕಟ್ಟೆ ನಿರ್ಮಾಣಕ್ಕೆ ಮುಂದಾದರೆ ತಮಿಳುನಾಡು ರೈತರ ಹಿತರಕ್ಷಣೆಗೆ ಬೇಕಾದ ಎಲ್ಲ ಕ್ರಮ ಕೈಗೊಳ್ಳಲು ತಮ್ಮ ಸರ್ಕಾರ ಸಿದ್ಧ ಎಂದು ಅವರು ಹೇಳಿದ್ದಾರೆ.