
ಪಾಟ್ನಾ: ಮತ್ತೊಂದು ಕ್ರೂರ ಘಟನೆಗೆ ಬಿಹಾರ ಸಾಕ್ಷಿಯಾಗಿದ್ದು, ಲೂಟಿ ಮಾಡಲು ಬಂದಿದ್ದಾರೆ ಎಂದು ಆರೋಪಿಸಿ ಇಬ್ಬರು ಯುವಕರನ್ನು ಗ್ರಾಮಸ್ಥರು ಮನಸೋ ಇಚ್ಛೆ ಥಳಿಸಿ ಕೊಂದು ಹಾಕಿರುವ ಘಟನೆ ಛಾಪ್ರಾದಲ್ಲಿ ನಡೆದಿದೆ.
ಛಾಪ್ರಾದ ಗುರಸಾಯಿ ಬೀಡ್ ನಲ್ಲಿ ಈ ಕ್ರೂರ ಘಟನೆ ನಡೆದಿದ್ದು, ಕಳ್ಳತನಕ್ಕೆ ಆಗಮಿಸಿದ್ದ ಇಬ್ಬರು ಯುವಕರನ್ನು ಗ್ರಾಮಸ್ಥರು ಭೀಕರವಾಗಿ ಬಡಿದು ಕೊಂದು ಹಾಕಿದ್ದಾರೆ. ಅಘಾತಕಾರಿ ಅಂಶವೆಂದರೆ ಕಳ್ಳರನ್ನು ಗ್ರಾಮಸ್ಥರು ಮನಸೋ ಇಚ್ಛೆ ಥಳಿಸುತ್ತಿದ್ದರೆ, ಸ್ಥಳದಲ್ಲಿದ್ದ ಛಾಪ್ರಾ ಪೊಲೀಸರು ಮಾತ್ರ ನಿಜಕ್ಕೂ ಮೂಕ ಪ್ರೇಕ್ಷಕರಾಗಿದ್ದರು. ಕನಿಷ್ಠ ಪಕ್ಷ ಕಳ್ಳರನ್ನು ಥಳಿಸಿದಂತೆ ಆಕ್ರೋಶಿತ ಜನರನ್ನು ತಡೆಯುವ ಗೋಜಿಗೂ ಪೊಲೀಸರು ಹೋಗದೆ ಇದದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಗ್ರಾಮಸ್ಥರು ಆರೋಪಿಸಿರುವಂತೆ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ಸ್ಥಳೀಯರನ್ನು ಬೆದರಿಸಿ ಕಳ್ಳತನಕ್ಕೆ ಯತ್ನಿಸಿದ್ದು, ಈ ವೇಳೆ ಅವರನ್ನು ಹಲವು ಗ್ರಾಮಸ್ಥರು ಸುತ್ತುವರೆದಿದ್ದಾರೆ. ಗ್ರಾಮಸ್ಥರಿಂದ ತಪ್ಪಿಸಿಕೊಳ್ಳಲು ಕಳ್ಳರು ಯತ್ನಿಸಿದರಾದರೂ, ಅವರನ್ನು ಬೆನ್ನಟ್ಟಿ ಹಿಡಿದ ಗ್ರಾಮಸ್ಥರು ಮನಸೋ ಇಚ್ಛೆ ಥಳಿಸಿದ್ದಾರೆ. ನೋಡ ನೋಡುತ್ತಿದ್ದಂತೆಯೇ ರಕ್ತದ ಮಡುವಿನಲ್ಲಿ ಬಿದಿದ್ದ ಕಳ್ಳರು ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನಾ ಸಂದರ್ಭದಲ್ಲಿ ಪೊಲೀಸರು ಸ್ಥಳದಲ್ಲಿದ್ದರು ಎಂಬ ವಿಚಾರ ಇದೀಗ ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದು, ಮೂಕ ಪ್ರೇಕ್ಷಕರಾಗಿದ್ದ ಪೊಲೀಸರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗ್ರಾಮದ ಹಲವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ದೂರಿನ ವಿಚಾರ ತಿಳಿಯುತ್ತಿದ್ದಂತೆಯೇ ಕಳ್ಳರ ಮೇಲೆ ಹಲ್ಲೆ ನಡೆಸಿದ್ದ ಗ್ರಾಮಸ್ಥರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳ್ಳರನ್ನು ಕೊಂದ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಫೇಸ್ ಬುಕ್, ಟ್ವಿಟರ್ ಮತ್ತು ವಾಟ್ಸಪ್ ನಲ್ಲಿ ವೈರಲ್ ಆಗಿದೆ.
Advertisement