ನವದೆಹಲಿ: ಎಷ್ಟು ಮಕ್ಕಳನ್ನು ಹೆರಬೇಕೆಂಬುದು ಅವರವರ ವೈಯಕ್ತಿಕ ಆಯ್ಕೆಯಾಗಿದ್ದು, ನಮ್ಮ ಅಭಿಪ್ರಾಯಗಳನ್ನು ಬೇರೊಬ್ಬರ ಮೇಲೆ ಹೇರುವ ಹಕ್ಕು ಯಾರಿಗೂ ಇಲ್ಲ ಎಂದು ಆರ್ ಜೆಡಿ ಸೋಮವಾರ ಹೇಳಿದೆ.
ಹಿಂದೂಗಳು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕೆಂಬ ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆರ್ ಜೆಡಿ ನಾಯಕ ಮನೋಜ್ ಝಾ ಅವರು, ಮಕ್ಕಳನ್ನು ಹೆರುವ ವಿಚಾರ ವೈಯಕ್ತಿಕ ಆಯ್ಕೆಗೆ ಸಂಬಂಧಿಸಿದ್ದು. ಮೋಹನ್ ಭಾಗವತ್ ಅವರ ಅನಿಸಿಕೆ ಇದರಲ್ಲಿ ಅಗತ್ಯವಿಲ್ಲ. ನಮ್ಮ ಅಭಿಪ್ರಾಯಗಳನ್ನು ಬೇರೊಬ್ಬರ ಮೇಲೆ ಹೇರುವ ಹಕ್ಕು ಯಾರಿಗೂ ಇಲ್ಲ. ನಾವು ಎಂತಹ ಸಮಾಜದಲ್ಲಿ ಜೀವನ ನಡೆಸುತ್ತಿದ್ದೇವೆ? ಯಾವ ರೀತಿಯ ರಾಷ್ಟ್ರೀಯ ತತ್ವಗಳನ್ನು ಹೇರಲು ಪ್ರಯತ್ನಿಸುತ್ತಿದ್ದೇವೆ? ಎಂದು ಪ್ರಶ್ನಿಸಿದ್ದಾರೆ.
ಮಕ್ಕಳನ್ನು ಹೆರುವುದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಜನಸಂಖ್ಯೆ ತಡೆಯುವುದಷ್ಟೇ ನಮ್ಮ ದೊಡ್ಡ ಸಮಸ್ಯೆಯಾಗಿದ್ದು, ಇದರಲ್ಲಿ ಹಿಂದೂ, ಮುಸ್ಲಿಂ ಎಂಬುದು ಬರುವುದಿಲ್ಲ ಎಂದು ಹೇಳಿದ್ದಾರೆ.
ಆಗ್ರಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮೋಹನ್ ಭಾಗವತ್ ಅವರು, ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬಾರದೆಂದು ಯಾವುದೇ ಕಾನೂನುಗಳಿಲ್ಲ. ಮಕ್ಕಳನ್ನು ಹೆರುವುದು ಸರ್ಕಾರದ ಆಡಳಿತಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಇದು ಸಮಾಜ ರಚನೆಗೆ ಸಂಬಂಧಿಸಿದ್ದಾಗಿದೆ. ಕುಟುಂಬ ಹಾಗೂ ದೇಶದ ಹಿತಾಸಕ್ತಿ ಬಗ್ಗೆ ಚಿಂತಿಸಿ ಹಿಂದೂಗಳು ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕಿದೆ ಎಂದು ಹೇಳಿದ್ದರು.
Advertisement