ವರದಿ ಬರೆಯುವಾಗಲೇ ಪತ್ರಕರ್ತನಿಗೆ 6 ಬಾರಿ ಚಾಕು ಇರಿತ!

ಬಿಹಾರ ಪತ್ರಕರ್ತ ರಂಜನ್ ಕೊಲೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಗುಜರಾತ್ ನಲ್ಲಿ ನಡೆದಿದ್ದು, ರಾತ್ರಿ ಕಚೇರಿಯಲ್ಲಿ ವರದಿ ಬರೆಯುತ್ತಿರುವಾಗಲೇ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಹಿರಿಯ ಪತ್ರಕರ್ತನೋರ್ವನನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ.
ಹತ್ಯೆಗೀಡಾದ ಪತ್ರಕರ್ತ ಕಿಶೋರ್ ದಾವೆ
ಹತ್ಯೆಗೀಡಾದ ಪತ್ರಕರ್ತ ಕಿಶೋರ್ ದಾವೆ
Updated on: 

ಅಹ್ಮದಾಬಾದ್: ಬಿಹಾರ ಪತ್ರಕರ್ತ ರಂಜನ್ ಕೊಲೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಗುಜರಾತ್ ನಲ್ಲಿ ನಡೆದಿದ್ದು, ರಾತ್ರಿ ಕಚೇರಿಯಲ್ಲಿ ವರದಿ  ಬರೆಯುತ್ತಿರುವಾಗಲೇ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಹಿರಿಯ ಪತ್ರಕರ್ತನೋರ್ವನನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಗುಜರಾತ್ ನ ಜುನಾಘಡ್ ನಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೃತನನ್ನು ಜೈ ಹಿಂದ್ ಪತ್ರಿಕೆಯ 53 ವರ್ಷದ ಹಿರಿಯ ಪತ್ರಕರ್ತ ಕಿಶೋರ್ ದಾವೆ ಎಂದು  ಗುರುತಿಸಲಾಗಿದೆ. ಸೋಮವಾರ ರಾತ್ರಿ ಸುಮಾರು 9 ಗಂಟೆ ವೇಳೆಯಲ್ಲಿ ಈ ಹತ್ಯೆ ನಡೆದಿದ್ದು, ಘಟನಾ ಸಂಧರ್ಭದಲ್ಲಿ ಕಚೇರಿಯಲ್ಲಿ ಪತ್ರಕರ್ತ ಕಿಶೋರ್ ದಾವೆ ಒಬ್ಬರೇ ಇದ್ದರು ಎಂದು  ತಿಳಿದುಬಂದಿದೆ. ಇದೇ ಸಂದರ್ಭಕ್ಕಾಗಿ ಕಾದು ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಅವರ ಮೇಲೆ ದಾಳಿ ನಡೆಸಿ ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದಾರೆ.

ತೀವ್ರ ರಕ್ತಸ್ರಾವವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಿಶೋರ್ ದಾವೆ ಅಲ್ಲೇ ಸಾವನ್ನಪ್ಪಿದ್ದಾರೆ. ಕಿಶೋರ್ ದಾವೆ ಅವರ ಸಂಬಂಧಿಕರಿಂದ ಈ ವಿಚಾರ ಪೊಲೀಸರಿಗೆ ತಿಳಿದಿದ್ದು, ಕೂಡಲೇ ಸ್ಥಳಕ್ಕೆ  ಆಗಮಿಸಿದ ಪೊಲೀಸರು ಪರೀಕ್ಷೆ ನಡೆಸಿದಾಗ ಕಿಶೋರ್ ದಾವೆ ಅವರ ದೇಹದ ಮೇಲೆ 7-8 ಚಾಕು ಇರಿತದ ಗುರುತುಗಳು ಪತ್ತೆಯಾಗಿವೆ. ಪ್ರಸ್ತುತ ದೇಹವನ್ನು ಮರಣೋತ್ತರ ಪರೀಕ್ಷೆಗೆ  ಕಳುಹಿಸಲಾಗಿದ್ದು, ಇನ್ನಷ್ಟೇ ವರದಿ ಬರಬೇಕಿದೆ.

ಏನಿದು ಘಟನೆ?

ಪೊಲೀಸ್ ಪ್ರಾಥಮಿಕ ಮೂಲಗಳ ಪ್ರಕಾರ, ಕಿಶೋರ್ ದಾವೆ ಜೈ ಹಿಂದ್ ಪತ್ರಿಕೆಯ ಜುನಾಘಡ್ ಪ್ರದೇಶದ ಹಿರಿಯ ಪತ್ರಕರ್ತರಾಗಿದ್ದು, ಜುನಾಘಡ್ ನ ವಂಜಾರಿ ಚೌಕ್ ನಲ್ಲಿ ಪತ್ರಿಕೆಯ ಪುಟ್ಟ  ಕಚೇರಿ ಇದೆ. ಕಚೇರಿಯಲ್ಲಿ ಓರ್ವ ಸಹಾಯಕನೊಂದಿಗೆ ಕಿಶೋರ್ ದಾವೆ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ನಿನ್ನೆ ಕೂಡ ತಡರಾತ್ರಿಯಲ್ಲಿ ಕಿಶೋರ್ ದಾವೆ ಕಚೇರಿಯಲ್ಲಿ  ಸುದ್ದಿಯೊಂದರ ಕುರಿತ ವರದಿ ಬರೆಯುತ್ತಿದ್ದಾಗ, ಕಚೇರಿಗೆ ದಿಢೀರ್ ನುಗ್ಗಿದ ದುಷ್ಕರ್ಮಿಗಳು ನೋಡ ನೋಡುತ್ತಿದ್ದಂತೆಯೇ ಮನಸೋ ಇಚ್ಛೆ ಇರಿದಿದ್ದಾರೆ. ಚಾಕು ಇರಿತದಿಂದ ಕಿಶೋರ್ ದಾವೆ   ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಕಿಶೋರ್ ದಾವೆ ಅವರನ್ನು ಅವರ ಸಂಬಂಧಿಯೊಬ್ಬರು ಮೊಬೈಲ್ ಮೂಲಕವಾಗಿ ಸಂಪರ್ಕಿಸಲು ಯತ್ನಿಸಿದ್ದು, ಅವರು ಫೋನ್ ತೆಗೆಯದಿದ್ದರಿಂದ ಅನುಮಾನಗೊಂಡ ಅವರ ಸಂಬಂಧಿ  ಜಜಡಿಯಾ ಅವರು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ವಿಚಾರ ತಿಳಿದ ಪೊಲೀಸರು ಕಚೇರಿಗೆ ಆಗಮಿಸಿದಾಗ ಕಿಶೋರ್ ದಾವೆ ಮೃತದೇಹ ಪತ್ತೆಯಾಗಿದೆ.

ಕಿಶೋರ್ ದಾವೆ ಅವರ ಸ್ನೇಹಿತರು ಮಾಹಿತಿ ನೀಡಿರುವಂತೆ ಕಿಶೋರ್ ದಾವೆ ಕೊಲೆಗೆ ಸ್ಥಳೀಯ ರಾಜಕಾರಣಿಯೊಬ್ಬರ ಪುತ್ರ ಕಾರಣ ಎಂದು ಆರೋಪಿಸಲಾಗುತ್ತಿದ್ದು, ರಾಜಕಾರಣಿ ಪುತ್ರ  ಲೈಂಗಿಕ ದೌರ್ಜನ್ಯದ ಕುರಿತು ಕಿಶೋರ್ ದಾವೆ ವರ್ಷದ ಹಿಂದೆ ವರದಿ ಮಾಡಿದ್ದರಂತೆ. ಈ ಘಟನೆ ಬಳಿಕ ರಾಜಕಾರಣಿ ಪುತ್ರ ಕಿಶೋರ್ ದಾವೆ ಅವರಿಗೆ ಬೆದರಿಕೆ ಹಾಕಿದ್ದನಂತೆ. ಅಲ್ಲದೆ  ಕಿಶೋರ್ ದಾವೆ ವಿರುದ್ಧ ರಾಜಕಾರಣಿಯೋರ್ವ ಸೈಬರ್ ಅಪರಾಧದಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಪ್ರಕರಣ ಸಂಬಂಧ ಕಿಶೋರ್ ಜಾಮೀನು ಪಡೆದಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com