
ಶ್ರೀನಗರ: ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಮುಂದುವರೆದಿದ್ದು, ಪುಲ್ವಾಮ ಜಿಲ್ಲೆಯಲ್ಲಿ ಬುಧವಾರ ನಡೆದ ಘರ್ಷಣೆಯಲ್ಲಿ ಯುವಕನೊಬ್ಬ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ.
ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪರಿಸ್ಥಿತಿ ಅವಲೋಕನಕ್ಕಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಇದರ ಬೆನ್ನಲ್ಲೇ ಪುಲ್ವಾಮ ಜಿಲ್ಲೆಯಲ್ಲಿ ಘರ್ಷಣೆ ಆರಂಭವಾಗಿದ್ದು, ನೂರಕ್ಕೂ ಹೆಚ್ಚು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಪ್ರತಿಭಟನೆ ವೇಳೆ ಘರ್ಷಣೆಯುಂಟಾದ ಪರಿಣಾಮ ಓರ್ವ ಯುವಕ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ. ಇದರಂತೆ ಕಾಶ್ಮೀರ ಹಿಂಸಾಚಾರದಲ್ಲಿ ಸಾವಿನ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.
ಆಮಿರ್ ಬಶಿರ್ ಮೃತ ಯುವಕ ಎಂದು ಗುರ್ತಿಸಲಾಗಿದೆ. ಘರ್ಷಣೆ ವೇಳೆ ಆಮಿರ್ ಎದೆಯ ಭಾಗದಲ್ಲಿ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಪೊಲೀಸರು ಆತನನ್ನು ಎಸ್ಎಂಹೆಚ್ ಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ಯುವಕ ಪುಲ್ವಾಮ ಜಿಲ್ಲೆಯ ಪೊಹು ಗ್ರಾಮದವನಾಗಿದ್ದಾನೆ. ಇಂದು ಬೆಳಿಗ್ಗೆ ಇದೇ ಸ್ಥಳದಲ್ಲಿ ಸೇನೆ ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಘಟನೆ ವೇಳೆ ಹಲವರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
Advertisement