ಅಭಿಮಾನಿ ಸಾವಿಗೆ ಪವನ್ ಕಲ್ಯಾಣ್ ಆಕ್ರೋಶ: ತಪ್ಪಿತಸ್ಥರ ವಿರುದ್ಧ ಶಿಕ್ಷೆಗೆ ಆಗ್ರಹ

ಅಭಿಮಾನಿಯೊಬ್ಬನ ಹತ್ಯೆಗೆ ತೆಲುಗು ಖ್ಯಾತ ಚಿತ್ರ ನಟ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ...
ಮೃತ ವಿನೋದ್ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿರುವ ನಟ ಪವನ್ ಕಲ್ಯಾಣ್
ಮೃತ ವಿನೋದ್ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿರುವ ನಟ ಪವನ್ ಕಲ್ಯಾಣ್

ಹೈದರಾಬಾದ್: ಅಭಿಮಾನಿಯೊಬ್ಬನ ಹತ್ಯೆಗೆ ತೆಲುಗು ಖ್ಯಾತ ಚಿತ್ರ ನಟ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.

ಸೋಮವಾರವಷ್ಟೇ ನಟ ಪವನ್ ಕಲ್ಯಾಣ್ ಅವರು ವಿಶೇಷ ವಿಮಾನದ ಮೂಲಕ ತಿರುಪತಿಯಿಂದ ಹೈದರಾಬಾದ್ ಗೆ ಭೇಟಿ ನೀಡಿದ್ದರು. ಈ ವೇಳೆ ಸಾವನ್ನಪ್ಪಿದ್ದ ತಮ್ಮ ಅಭಿಮಾನಿ ವಿನೋದ್ ಕುಮಾರ್ ಅವರ ಕುಟುಂಬಕ್ಕೆ ಭೇಟಿ ನೀಡಿದ ಅವರು, ವಿನೋದ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಪ್ರತಿಕ್ರಿಯೆ ನೀಡಿದ ಅವರು, ನೆಚ್ಚಿನ ನಟನ ಮೇಲಿನ ಅಭಿಮಾನ ಕೊಲೆಯ ಹಂತದವರೆಗೂ ಹೋಗಬಾರದು. ವಿನೋದ್ ಕುಮಾರ್ ಸಾವಿಗೆ ಬಹಳ ದುಖಃವಾಗುತ್ತಿದೆ. ವಿನೋದ್ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕಾಗಿ ಬಂದಿದ್ದೇನೆ. ವಿನೋದ್ ಸಾವಿಗೆ ಕಾರಣಕರ್ತರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ವಿನೋದ್ ಯೋಜನೆ ರೂಪಿಸಿದ್ದ, ಆದರೆ, ಅಷ್ಟರಲ್ಲಾಗಲೇ ಘಟನೆ ಸಂಭವಿಸಿದೆ. ಇದು ದುಃಖಕರ ಸಂಗತಿ. ತಮ್ಮ ನೆಚ್ಚಿನ ನಟರ ಪರವಾಗಿ ವಾದ ಮಾಡುವುದು, ಸಮರ್ಥಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಆದರೆ, ಕೊಲೆಯ ಹಂತಕ್ಕೆ ಹೋಗುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?
ತೆಲುಗು ಚಿತ್ರ ನಟ ಸುಮನ್ ರವರ ಹುಟ್ಟುಹಬ್ಬದ ಪ್ರಯುಕ್ತ ಕೋಲಾರದಲ್ಲಿ ರಕ್ತದಾನ ಶಿಬಿರವೊಂದನ್ನು ಕಳೆದ ಭಾನುವಾರ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ನಟ ಪವನ್ ಕಲ್ಯಾಣ್ ಅಭಿಮಾನಿ ಹಾಗೂ ಜ್ಯೂನಿಯರ್ ಎನ್ ಟಿಆರ್ ಅಭಿಮಾನಿಗಳ ಎರಡು ಗುಂಪೊಂದು ಬಂದಿತ್ತು.

ರಕ್ತದಾನದ ಬಳಿಕ ಹೇಳಿಕೆ ನೀಡಿದ್ದ ವಿನೋದ್ ಕುಮಾರ್, ನಾನು ಪವನ್ ಕಲ್ಯಾಣ್ ಅವರ ಅಭಿಮಾನಿ. ಅವರಿಗಾಗಿ ಅಂಗಾಂಗ ದಾನ ಮಾಡಲು ಸಿದ್ಧನಿದ್ದೇನೆಂದು ಹೇಳಿಕೊಂಡಿದ್ದರು.

ಕಾರ್ಯಕ್ರಮ ಅಂತಿಮಗೊಂಡ ಬಳಿಕ ಕೋಲಾರದ ನರಸಾಪುರ ಬಳಿಯಿರುವ ರೆಸ್ಟೋರೆಂಟ್ ವೊಂದಕ್ಕೆ ಹೋಗಿದ್ದ ಈ ಎರಡೂ ಗುಂಪುಗಳು ಅಲ್ಲಿ ಕಂಠಪೂರ್ತಿ ಕುಡಿದು ಊಟ ಮಾಡಿದ್ದಾರೆ. ನಂತರ ಎರಡೂ ಗುಂಪುಗಳು ತಮ್ಮ ತಮ್ಮ ನಟರ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಈ ವೇಳೆ ಪವನ್ ಕಲ್ಯಾಣ್ ಅಭಿಮಾನಿಯಾಗಿರುವ ವಿನೋದ್ ಕುಮಾರ್ ಹಾಗೂ ಜ್ಯೂನಿಯರ್ ಎನ್ ಟಿಆರ್ ಅಭಿಮಾನಿಯಾಗಿರುವ ಅಕ್ಷಯ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವೆ ಜಗಳವಾಗಿದೆ.

ನಂತರ ಹೋಟೆಲ್ ನಿಂದ ವಿನೋದ್ ಹಾಗೂ ಅಕ್ಷಯ್ ಇಬ್ಬರೂ ಹೊರಬಂದಿದ್ದಾರೆ. ಹೊರ ಬಂದ ನಂತರ ಕೂಡ ಇಬ್ಬರ ನಡುವೆ ತಳ್ಳಾಟ ನಡೆದಿದೆ. ಇದರಂತೆ ತೀವ್ರವಾಗಿ ಕೆಂಡಮಂಡಲವಾದ ಅಕ್ಷಯ್ ತನ್ನ ಬಳಿ ಇದ್ದ ಚಾಕುವನ್ನು ತೆಗೆದು ವಿನೋದ್ ಕುಮಾರ್ ನ ಕಿಬ್ಬೊಟ್ಟೆಗೆ ಇರಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಸ್ನೇಹಿತರು ವಿನೋದ್ ನನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ.

ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಗಾಬರಿಯಲ್ಲಿ ಕಾರು ಚಾಲನೆ ಮಾಡುತ್ತಿದ್ದಾತ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಅಪಘಾತ ಸಂಭವಿಸಿದೆ. ಕೂಡಲೇ ಮತ್ತೊಂದು ಕಾರಿನಲ್ಲಿ ವಿನೋದ್ ನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ, ಮಾರ್ಗದ ಮಧ್ಯೆಯೇ ವಿನೋದ್ ಮೃತಪಟ್ಟಿದ್ದಾನೆ.

ಸಾವಿನ ಸುದ್ಧಿ ಕೇಳುತ್ತಿದ್ದಂತೆ ವಿನೋದ್ ಕುಟುಂಬಸ್ಥರು ಆಘಾತಗೊಂಡಿದ್ದರು. ದುಃಖದ ನಡುವೆಯೂ ವಿನೋದ್ ಕೊನೆಯ ಆಸೆಯಂತೆಯೇ ಆತನ ಕಣ್ಣುಗಳನ್ನು ದಾನ ಮಾಡುವ ಮೂಲಕ ಔದಾರ್ಯ ಮೆರೆದರು. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಕ್ಷಯ್ ಕುಮಾರ್ ನನ್ನು ಬಂಧನಕ್ಕೊಳಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com