ಹೆಣ್ಣು ಮಗು ಎಂದು ಎದೆ ಹಾಲು ನೀಡಲು ನಿರಾಕರಿಸಿದ ತಾಯಿ!

ಹೆಣ್ಣು ಮಗು ಎಂದು ತಿಳಿದು ತಾನು ಜನ್ಮ ನೀಡಿದ ಮಗುವಿಗೇ ತಾಯಿಯೊಬ್ಬಳು ಎದೆಹಾಲು ನೀಡಲು ನಿರಾಕರಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಹೆಣ್ಣು ಮಗು ಎಂದು ತಿಳಿದು ತಾನು ಜನ್ಮ ನೀಡಿದ ಮಗುವಿಗೇ ತಾಯಿಯೊಬ್ಬಳು ಎದೆಹಾಲು ನೀಡಲು ನಿರಾಕರಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣ ರಾಜಧಾನಿ ಹೈದರಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಹೆಣ್ಣು ಮಗು ಎಂಬ ಕಾರಣಕ್ಕೆ 22 ವರ್ಷದ ರಜಿತಾ ಎಂಬ ಬುಡುಕಟ್ಟು ಜನಾಂಗದ ಮಹಿಳೆ ಎದೆ ಹಾಲು  ನೀಡಲು ನಿರಾಕರಿಸಿದ್ದಾಳೆ. ವೈದ್ಯರು ಹಾಗೂ ಪೋಷಕರು ಎಷ್ಟೇ ಪ್ರಯತ್ನಿಸಿದರೂ ಅವರ ಮಾತಿಗೆ ಒಪ್ಪದ ರಜಿತಾ ಎದೆ ಹಾಲು ನೀಡುವುದಿಲ್ಲ ಎಂದು ಹೇಳಿದ್ದಾರೆ. ಮಗು ಜನಿಸಿ ಇನ್ನೂ ಕೇವಲ  ನಾಲ್ಕು ದಿನಗಳಷ್ಟೇ ಕಳೆದಿದ್ದು, ತಾಯಿ ಎದೆ ಹಾಲು ಕುಡಿಸಲು ನಿರಾಕರಿಸಿರುವುದರಿಂದ ಬೇರೆ ದಾರಿಯಿಲ್ಲದೇ ಆಸ್ಪತ್ರೆ ದಾದಿಯರೇ ಬಾಟಲಿ ಹಾಲನ್ನು ಮಗುವಿಗೆ ಕುಡಿಸುತ್ತಿದ್ದಾರೆ.

ಪೋಷಕರು ಆರೋಪಿಸಿರುವಂತೆ ಮಗು ಜನಿಸಿದಾಗ ವೈದ್ಯರು ಗಂಡು ಮಗು ಎಂದು ಹೇಳಿದ್ದರು. ಆದರೆ ಬಳಿಕ ಹೆಣ್ಣು ಮಗುವನ್ನು ತಂದಿದ್ದಾರೆ. ಹೀಗಾಗಿ ರಜಿತಾ ತನ್ನದಲ್ಲದ ಮಗುವಿಗೆ ಹಾಲು  ಕುಡಿಸುವುದಿಲ್ಲ ಎಂದು ಹೇಳುತ್ತಿದ್ದಾಳೆ ಎಂದು ಹೇಳಿದ್ದಾರೆ. ಆದರೆ ಪೋಷಕರ ಆರೋಪವನ್ನು ನಿರಾಕರಿಸಿರುವ ಆಸ್ಪತ್ರೆ ಆಡಳಿತ ಮಂಡಳಿ ಪ್ರತಿನಿತ್ಯ ಇಲ್ಲಿ ಸುಮಾರು 40 ಮಕ್ಕಳು ಜನಿಸುತ್ತವೆ.  ಎಂದಿಗೂ ಮಕ್ಕಳು ಅದಲುಬದಲಾದ ಉದಾಹರಣೆ ಇಲ್ಲ. ಅಂತಹ ಕೆಲಸ ನಾವು ಮಾಡುವುದೂ ಇಲ್ಲ. ರಜಿತಾ ಅವರಿಗೆ ಹೆಣ್ಣು ಮಗುವೇ ಜನಿಸಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯೆ ವಿದ್ಯಾವತಿ  ಹೇಳಿದ್ದಾರೆ.

ರಜಿತಾಗೆ ಮಗು ಜನಿಸಿದ್ದ ಸಂದರ್ಭದಲ್ಲಿಯೇ ರಮಾ ಎಂಬುವರಿಗೂ ಕೂಡ ಮಗು ಜನನವಾಗಿತ್ತು. ರಮಾಗೆ ಗಂಡು ಮಗುವಾಗಿದ್ದರೆ ರಜಿತಾಗೆ ಹೆಣ್ಣು ಮಗು ಜನಿಸಿತ್ತು. ರಮಾ ಎಂಬುವವರಿಗೆ  ಮೊದಲು ಮಗು ಜನಿಸಿದ್ದು, ಕೂಡಲೇ ದಾದಿ ರಮಾ ಅವರ ಪೋಷಕರನ್ನು ಕೂಗಿದರು. ಆದರೆ ರಜಿತಾ ಅವರ ಪೋಷಕರು ಬಂದು ಮಗುವನ್ನು ಎತ್ತಿಕೊಂಡರು. ದಾದಿಗೆ ಇವರು ರಜಿತಾ  ಪೋಷಕರು ಎಂದು ತಿಳಿಯದೇ ಮಗುವನ್ನು ಅವರ ಕೈಗೆ ನೀಡಿದ್ದಾರೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ರಜಿತಾ ಮತ್ತು ಅವರ ಪೋಷಕರು ಆಸ್ಪತ್ರೆ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ  ಎಂದು ವಿದ್ಯಾವತಿ ಸ್ಪಷ್ಟನೆ ನೀಡಿದ್ದಾರೆ.

ತಾಯಿ ರಜಿತಾ ಮೂಲತಃ ಮೆಹಬೂಬ್ ನಗರದ ಮೂಲದವರಾಗಿದ್ದು, ಈಗ್ಗೆ 14 ತಿಂಗಳ ಹಿಂದಷ್ಟೇ ಈಕೆ ಮೊದಲ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗು ಗಂಡಾಗಬಹುದು ಎಂದು  ಊಹಿಸಿದ್ದ ರಜಿತಾ ಆಗ ನಿರಾಸೆ ಅನುಭವಿಸಿದ್ದರು. ಬಳಿಕ 2ನೇ ಬಾರಿಗೆ ಗರ್ಭಿಣಿಯಾಗಿದ್ದ ರಜಿತಾ ಈಗಲಾದರೂ ಗಂಡು ಮಗುವಾಗಬಹುದು ಎಂದು ಭಾರಿ ನಿರೀಕ್ಷೆ ಹೊಂದಿದ್ದರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com