ಮೋದಿ ಹೋದಾಗ ಪಾಕಿಸ್ತಾನ ನರಕವಾಗಿರಲಿಲ್ಲವೇ?: ದಿಗ್ವಿಜಯ್ ಸಿಂಗ್ ಪ್ರಶ್ನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೋದಾಗ ಪಾಕಿಸ್ತಾನ ದೇಶ ನರಕವಾಗಿರಲಿಲ್ಲವೇ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ (ಸಂಗ್ರಹ ಚಿತ್ರ)
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ (ಸಂಗ್ರಹ ಚಿತ್ರ)

ಪಣಜಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೋದಾಗ ಪಾಕಿಸ್ತಾನ ದೇಶ ನರಕವಾಗಿರಲಿಲ್ಲವೇ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೆ ಶನಿವಾರ ಪ್ರಶ್ನೆ ಹಾಕಿದ್ದಾರೆ.

ಪಾಕಿಸ್ತಾನವನ್ನು ನರಕ ಎಂದು ಹೇಳಿದ್ದ ಮನೋಹರ್ ಪರಿಕ್ಕರ್ ಅವರ ಹೇಳಿಕೆ ಕುರಿತಂತೆ ಇಂದು ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರ ಕುಟುಂಬಸ್ಥರ ಮದುವೆಯೊಂದಕ್ಕೆ ನರೇಂದ್ರ ಮೋದಿಯವರು ಹೋಗಿದ್ದರು. ಯಾವುದೇ ಪ್ರಕಟಣೆಗಳು ಹಾಗೂ ಪೂರ್ವಸಿದ್ಧತೆಯಿಲ್ಲದೆಯೇ ಪಾಕಿಸ್ತಾನಕ್ಕೆ ಹೋಗಲಾಗಿತ್ತು. ಮೋದಿಯವರು ಹೋದಾಗ ಪಾಕಿಸ್ತಾನ ನರಕವಾಗಿರಲಿಲ್ಲವೇ?... ಎಂದು ಹೇಳಿದ್ದಾರೆ.

ಲಾಲ್ ಕೃಷ್ಣ ಅಡ್ವಾಣಿಯವರು ಮೊಹಮದ್ ಅಲಿ ಜಿನ್ನಾ ಅವರನ್ನು ಜಾತ್ಯಾತೀತ ನಾಯಕ ಎಂದು ಹಾಡಿಹೊಗಳಿದ್ದರು. ಆಗ ಪರಿಕ್ಕರ್ ರಿಂದ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿಯವರು ಇದೇ ನರಕದ ಪಾಕಿಸ್ತಾನಕ್ಕೆ ಬಸ್ ಮೂಲಕ ಹೋಗಿದ್ದರು. ಆಗ ಪರಿಕ್ಕರ್ ಗೆ ವಿರೋಧಗಳಿರಲಿಲ್ಲ. ಪಕ್ಷದ ಹಿರಿಯ ನಾಯಕರು ಪಾಕಿಸ್ತಾನಕ್ಕೆ ಹೋದಾಗ ಪರಿಕ್ಕರ್ ಪ್ರತಿಭಟಿಸುವುದಿಲ್ಲ.

ಭಾರತೀಯ ಜನತಾ ಪಕ್ಷ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಅಸಹಿಷ್ಣುತೆಯನ್ನುಂಟು ಮಾಡುತ್ತಿದ್ದು, ಈ ಅಸಹಿಷ್ಣುತೆ ಪರಿಕ್ಕರ್ ಅವರ ಹೇಳಿಕೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ವಿರುದ್ಧ ದಾಖಲಿಸಲಾಗಿರುವ ದೇಶದ್ರೋಹ ಪ್ರಕರಣವನ್ನು ಖಂಡಿಸಿದ್ದಾರೆ.

ಈ ಹಿಂದೆ ಹರಿಯಾಣದ ರೋವರಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ರಕ್ಷಣಾ ಸಚಿವ ಪರಿಕ್ಕರ್ ಅವರು, ಪಾಕಿಸ್ತಾನಕೆ ಹೋಗುವುದೂ ಒಂದೇ, ನರಕಕ್ಕೆ ಹೋಗುವುದೂ ಒಂದೇ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com