ದಾರಿತಪ್ಪಿಸುವ ಜಾಹಿರಾತು: ಸೆಲೆಬ್ರಿಟಿಗಳಿಗೆ ಜೈಲು ಶಿಕ್ಷೆಗೆ ಸಂಸದೀಯ ಸಮಿತಿ ಶಿಫಾರಸು

ಲಕ್ಸ್ ಸೋಪನ್ನು ಹಚ್ಚಿಕೊಂಡು ತಮ್ಮ ಸುಂದರ ಮೈಮಾಟಕ್ಕೆ ಈ ಸೋಪೇ ಕಾರಣ ಎಂದು ಹೇಳುವ ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಫೇರ್ ಆ್ಯಂಡ್ ಲವ್ಲಿ ಕ್ರೀಮ್ ಹಚ್ಚಿಕೊಂಡರೆ ವಾರದಲ್ಲಿ ನಿಮ್ಮ ಮುಖಕಾಂತಿ ಸಂಪೂರ್ಣವಾಗಿ ಬದಲಾಗುತ್ತದೆ ಎನ್ನುವ ನಟಿ ಯಾಮಿ...
ಕರೀನಾ ಹಾಗೂ ಯಾಮಿ ಗೌಮತಿ (ಸಂಗ್ರಹ ಚಿತ್ರ)
ಕರೀನಾ ಹಾಗೂ ಯಾಮಿ ಗೌಮತಿ (ಸಂಗ್ರಹ ಚಿತ್ರ)

ನವದೆಹಲಿ: ಲಕ್ಸ್ ಸೋಪನ್ನು ಹಚ್ಚಿಕೊಂಡು ತಮ್ಮ ಸುಂದರ ಮೈಮಾಟಕ್ಕೆ ಈ ಸೋಪೇ ಕಾರಣ ಎಂದು ಹೇಳುವ ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಫೇರ್ ಆ್ಯಂಡ್ ಲವ್ಲಿ ಕ್ರೀಮ್ ಹಚ್ಚಿಕೊಂಡರೆ ವಾರದಲ್ಲಿ ನಿಮ್ಮ ಮುಖಕಾಂತಿ ಸಂಪೂರ್ಣವಾಗಿ ಬದಲಾಗುತ್ತದೆ ಎನ್ನುವ ನಟಿ ಯಾಮಿ ಗೌತಮಿಯಂತಹ ಇನ್ನಿತರೆ ಜಾಹೀರಾತುಗಳ ಬ್ರ್ಯಾಂಡ್ ಅಂಬಾಸಿಡರ್ ಗಳಿಗೆ ಇನ್ನು ಮುಂದೆ ಕಾದಿದೆ ಕೆಟ್ಟ ದಿನಗಳು.

ತಪ್ಪು ಮಾಹಿತಿ ನೀಡುವ ಸಂಸ್ಥೆ ಹಾಗೂ ರಾಯಭಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸಿದ್ಧತೆ ನಡೆಸಿದ್ದು, ಈಗಾಗಲೇ ಈ ಕುರಿತ ಕರಡು ವಿಧೇಯಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ತಮಗಿಷ್ಟವಾದ ನಟ ನಟಿಯರು ಜಾಹೀರಾತುಗಳನ್ನು ನೀಡಿದರೆ, ಆ ವಸ್ತುಗಳನ್ನು ಕೊಂಡು ನಟ-ನಟಿಯರು ಹೇಳಿದಂತೆ ನಡೆಯದೇ ಹೋದರೆ, ಅಂಥ ಜಾಹೀರಾತಿನ ವಿರುದ್ಧ ಗ್ರಾಹಕರು ದೂರು ಸಲ್ಲಿಸಬಹುದಾಗಿದೆ. ಗ್ರಾಹಕರು ಹೇಳಿದ್ದು ಸತ್ಯ ಎಂಬುದು ಸಾಬೀತಾದರೆ, ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ಸಂಸ್ಥೆ ಹಾಗೂ ರಾಯಭಾರಿಗಳಿಗೆ 5 ವರ್ಷ ಶಿಕ್ಷೆ, ರು. 50 ಲಕ್ಷ ದಂಡ ಖಚಿತವಾಗಲಿದೆ.

ತಪ್ಪು ಮಾಹಿತಿ ನೀಡುವ ಸಂಸ್ಥೆ ಹಾಗೂ ರಾಯಭಾರಿ ವಿರುದ್ಧ ಇಂಥ ಕ್ರಮ ಅನುಸರಿಸಬಹುದು ಎಂದು ಸಂಸದೀಯ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಕೇಂದ್ರ ಸರ್ಕಾರ ಈ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸಿರುವುದರಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಸಂಪುಟ ಟಿಪ್ಪಣಿ ಸಿದ್ಧಪಡಿಸಿ ಕಾನೂನು ಸಚಿವಾಲಯಕ್ಕೆ ಕಳುಹಿಸಿ ಕೊಟ್ಟಿದೆ.

ತಪ್ಪು ಮಾಹಿತಿ ನೀಡುವ ಜಾಹೀರಾತುಗಳ ರಾಯಭಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಹಾಲಿ ಇರುವ ಕಾನೂನುಗಳಿಗೆ ಒಪ್ಪಿಗೆ ಸೂಚಿಸಲಾಗಿದ್ದು, ಶೀಘ್ರದಲ್ಲೇ ನಡೆಯಲಿರುವ ಕೇಂದ್ರ ಸಂಪುಟ ಸಭೆಯಲ್ಲಿ ತಪ್ಪು ಜಾಹೀರಾತು ಕುರಿತಂತೆ ರೂಪಿಸಲಾಗಿರುವ ಹೊಸ ಕರಡಿಗೆ ಅನುಮೋದನೆ ಸಿಗುವ ಸಾಧ್ಯತೆಯಿದೆ.

ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಬ್ರ್ಯಾಂಡ್ ಅಂಬಾಸಿಡರ್ ಗಳು ಹೇಳುವ ಮಾತುಗಳನ್ನು ನೋಡುವ ಅಥವಾ ಕೇಳುವ ಗ್ರಾಹಕರು ಸಾಮಾನ್ಯವಾಗಿಯೇ ಆ ವಸ್ತುಗಳನ್ನು ಇಷ್ಟ ಪಡುತ್ತಾರೆ. ಆ ವಸ್ತುಗಳನ್ನು ತಮ್ಮ ನೆಚ್ಚಿನ ನಟ-ನಟಿಯರು ಬಳಕೆ ಮಾಡಿದ್ದರಿಂದಲೇ ಈ ಮಾತುಗಳನ್ನು ಹೇಳಿದ್ದಾರೆಂದು ನಂಬಿ ಗ್ರಾಹಕರು ಆ ವಸ್ತುಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ರಾಯಭಾರಿಗಳು ಅಥವಾ ಸೆಲೆಬ್ರಿಟಿಗಳು ಹೇಳಿದಂತೆ ವಸ್ತುಗಳನ್ನು ಬಳಕೆ ಮಾಡಿದಾಗ ನಡೆಯದೇ ಹೋದರೆ ಗ್ರಾಹಕರು ದೂರು ಸಲ್ಲಿಸಬಹುದಾಗಿದೆ.

ಆಹಾರ, ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣೆಗಾಗಿನ ಸಂಸತ್ ನ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಸಿ. ದಿವಾಕರ ರೆಡ್ಡಿ ನೇತೃತ್ವದ ಸಮಿತಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಈ ಬಗ್ಗೆ ವರದಿಯೊಂದರನ್ನು ಸರ್ಕಾರಕ್ಕೆ  ಸಲ್ಲಿಸಿತ್ತು.

ಹೊಸ ಕಾನೂನಿನಲ್ಲಿ ಬ್ರ್ಯಾಂಡ್ ಅಂಬಾಸಿಡರ್ ನ ಸಮ್ಮತಿಯಲ್ಲಿ ಯಾವುದೇ ದ್ವಂದ್ವಕ್ಕೆ ಅವಕಾಶ ಇರಬಾರದು ಎಂದು ಸಮತಿ ಅಭಿಪ್ರಾಯಪಟ್ಟಿತ್ತು. ಇದರಂತೆ ಕಾನೂನು ಸಚಿವಾಲಯ ಕೂಡ ಸಮ್ಮತಿಗೆ ಕೂಡ ವ್ಯಾಖ್ಯೆ ಸಿದ್ಧಪಡಿಸಿದೆ. ಸಮ್ಮತಿದಾರ ಗುಂಪು ಅಥವಾ ಸಂಸ್ಥೆಯೂ ಸೇರ್ಪಡೆಯಾಗಿದೆ. ಇದರಲ್ಲಿ ಕೇಂದ್ರ ಗ್ರಾಹಕರ ರಕ್ಷಣಾ ಪ್ರಾಧಿಕಾರ ರಚಿಸಲೂ ಅನುವು ಮಾಡಿಕೊಡಲಾಗಿದೆ. ತಪ್ಪು ಮಾಹಿತಿ ನೀಡುವ ಜಾಹೀರಾತು ಮತ್ತು ಅದರ ರಾಯಭಾರಿಗಳ ಬಗ್ಗೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದಾಗ ಅವರ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶವಿದೆ.

ರೂಪಿಸಲಾಗಿರುವ ಹೊಸ ಕರಡಿಗೆ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿದ್ದೇ ಆದರೆ, ಗ್ರಾಹಕರಿಗೆ ತಪ್ಪು ಮಾಹಿತಿ ನೀಡುವ ಸಂಸ್ಥೆಗಳು, ಸೆಲೆಬ್ರಿಟಿಗಳು ಅಥವಾ ರಾಯಬಾರಿಗಳಿಗೆ ಮೊದಲ ಹಂತದಲ್ಲಿ ಪ್ರಾಧಿಕಾರವು ರಾಯಭಾರಿಗೆ ದಂಡ ವಿಧಿಸುತ್ತದೆ.

ಸಮಿತಿ ಶಿಫಾರಸ್ಸು ಮಾಡಿರುವಂತೆ ಸಂಬಂಧಿತ ಜಾಹೀರಾತಿನ ವಿವಾದದಿಂದ ಮುಕ್ತಗೊಳಿಸುವ ಅಧಿಕಾರ ನ್ಯಾಯಾಲಯಕ್ಕೆ ಇರುತ್ತದೆ ಎಂದು ಹೇಳಿದೆ. ದಂಡ ವಿಧಿಸುವ ಸಂದರ್ಭದಲ್ಲಿ ಜಾಹೀರಾತಿನಿಂದ ಸಂಸ್ಥೆಗೆ ಬರಲಿರುವ ಆದಾಯವನ್ನು ಪ್ರಾಧಿಕಾರವು ಪರಿಗಣಿಸಲಿದೆ. ಜತೆಗೆ ಯಾವ ಪ್ರಮಾಣದಲ್ಲಿ ನಿಯಮ ಉಲ್ಲಂಘನೆಯಾಗಿದೆ. ಅದರ ಪ್ರಭಾವ ಎಷ್ಟು ಯಾವ ಹಂತದ ಜನರಿಗೆ ಅದರಿಂದ ತೊಂದರೆಯಾಗಿದೆ ಎನ್ನುವುದನ್ನು ಪರಿಗಣಿಸುತ್ತದೆ.

ಹೊಸ ಮಸೂದೆಯ ಸೆಕ್ಷ್ 75 ಬಿಯಲ್ಲಿ ಉಲ್ಲೇಖಿಸಿರುವ ಪ್ರಕಾರ ಜಾಹೀರಾತಿನಲ್ಲಿ ನೀಡಿರುವ ಮಾಹಿತಿ ತಪ್ಪು ಅಥವಾ ದಾರಿ ತಪ್ಪಿಸುವಂತಿದ್ದರೆ ಅದು ಗ್ರಾಹಕರ ಹಿತದೃಷ್ಟಿಯಿಂದ ಸರಿಯಲ್ಲ. ಇದು ಶಿಕ್ಷಾರ್ಹ ಅಪರಾಧ. ಮೊದಲ ಬಾರಿ ನಡೆಸುವ ಇಂಥ ಅಪರಾಧಕ್ಕಾಗಿ 2 ವರ್ಷ ಜೈಲು ಮತ್ತು ರು.10 ಲಕ್ಷ ದಂಡ, ಎರಡನೇ ಬಾರಿ ಮಾಡುವ ಇಂಥ ತಪ್ಪಿಗೆ ಐದು ವರ್ಷ ಜೈಲು ಮತ್ತು ರು.50 ಲಕ್ಷ ದಂಡ ವಿಧಿಸುವ ಶಿಫಾರಸನ್ನು ಸಮಿತಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com