
ಚೆನ್ನೈ: ಚೆನ್ನೈನಲ್ಲಿ ದಾಳಿ ಮಾಡಿದ್ದ ಆದಾಯ ತೆರಿಗೆ ಅಧಿಕಾರಿಗಳು ಭಾರಿ ಪ್ರಮಾಣದ ಅಕ್ರಮ ನಗದು ವಶಪಡಿಸಿಕೊಂಡಿದ್ದ ಪ್ರಕರಣದ ಬೆನ್ನಲ್ಲೇ ಮತ್ತೆ ವೆಲ್ಲೂರಿನಲ್ಲಿ 24 ಕೋಟಿ ಅಕ್ರಮ ಹೊಸ ನೋಟುಗಳು ಪತ್ತೆಯಾಗಿವೆ.
ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಚೆನ್ನೈನ ವಿವಿಧೆಡ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಇಂದು ವೆಲ್ಲೂರಿನಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾಗ ಸುಮಾರು 24 ಕೋಟಿ ಅಕ್ರಮ ನಗದು ಹಣ ಪತ್ತೆಯಾಗಿದೆ. ಕಾರಿನಲ್ಲಿ ಅಡಗಿಸಿಟ್ಟಿದ್ದ ಹಣವನ್ನು ಆದಾಯ ತೆರಿಗೆ ಅಧಿಕಾರಿಗಳು ಶೋಧನಡೆಸಿ ಪತ್ತೆ ಮಾಡಿದ್ದಾರೆ. ಹೊಸ 2 ಸಾವಿರ ರು. ನೋಟುಗಳಲ್ಲೇ ಎಲ್ಲ 24 ಕೋಟಿ ಹಣ ಪತ್ತೆಯಾಗಿರುವುದು ಅಧಿಕಾರಿಗಳಿಗೇ ಅಚ್ಚರಿ ಮೂಡಿಸಿದೆ. ಅಕ್ರಮವಾಗಿ ಹಣ ಹೊಂದಿದ್ದ ವ್ಯಕ್ತಿಯನ್ನು ಅಧಿಕಾರಿಗಳ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆ ಮೂಲಕ ಚೆನ್ನೈ ನಗರದವೊಂದರಲ್ಲೇ ನಡೆದ ಐಟಿ ದಾಳಿ ವೇಳೆ ಸಿಕ್ಕ ನಗದಿನ ಪ್ರಮಾಣ ಬರೊಬ್ಬರಿ 166 ಕೋಟಿಗೇರಿದ್ದು, ಇದಕ್ಕೂ ಮೊದಲಿನ ದಾಳಿಯಲ್ಲಿ 142 ಕೋಟಿ ರು. ನಗದು ಹಣ ಮತ್ತು 127 ಕೆಜಿ ಚಿನ್ನ ಪತ್ತೆಯಾಗಿತ್ತು.
ಮರಳು ಗಣಿಗಾರಿಕೆ ನಡೆಸುತ್ತಿದ್ದ ಗಣ್ಯರ ಚೆನ್ನೈನ ವಿವಿಧ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು ಅಪಾರ ಪ್ರಮಾಣದ ನಗದು ಹಾಗೂ ನೂರಾರು ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 8 ಪ್ರದೇಶಗಳಲ್ಲಿ ದಾಳಿ ನಡೆಸಿದ್ದ ಅಧಿಕಾರಿಗಳು ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಇಂದು ದಾಖಲೆ ಪತ್ರಗಳ ಪರಿಶೀಲನೆ ನಡೆಯುತ್ತಿರುವಂತೆಯೇ ಅಧಿಕಾರಿಗಳ ಮತ್ತೊಂದು ತಂಡ ಚೆನ್ನೈನ ವಿವಿಧೆಡೆ ದಾಳಿ ಮಾಡಿದೆ.
Advertisement