ತಿರುಮಲ: ಬಲೂನ್ ಒಡೆದ ಶಬ್ಧಕ್ಕೆ ಬೆದರಿ ಮಾವುತನನ್ನೇ ಎತ್ತೆಸೆದ ಆನೆ

ಸ್ಫೋಟದ ಶಬ್ದ ಕೇಳಿ ಗಾಬರಿಯಾದ ತಿರುಪತಿ ತಿರುಮಲ ಪವಿತ್ರ ಕ್ಷೇತ್ರದ ಆನೆ ತನ್ನ ಮಾವುತನನ್ನೇ ಎತ್ತಿ ಎಸೆದ ಘಟನೆ ಭಾನುವಾರ ತಿರುಮಲದಲ್ಲಿ ನಡೆದಿದೆ.
ತಿರುಮಲ ದೇವಾಲಯದ ಆನೆ (ಸಂಗ್ರಹ ಚಿತ್ರ)
ತಿರುಮಲ ದೇವಾಲಯದ ಆನೆ (ಸಂಗ್ರಹ ಚಿತ್ರ)

ತಿರುಪತಿ: ಸ್ಫೋಟದ ಶಬ್ದ ಕೇಳಿ ಗಾಬರಿಯಾದ ತಿರುಪತಿ ತಿರುಮಲ ಪವಿತ್ರ ಕ್ಷೇತ್ರದ ಆನೆ ತನ್ನ ಮಾವುತನನ್ನೇ ಎತ್ತಿ ಎಸೆದ ಘಟನೆ ಭಾನುವಾರ ತಿರುಮಲದಲ್ಲಿ ನಡೆದಿದೆ.

ದೇವಾಲಯಕ್ಕೆ ಆಗಮಿಸಿದ್ದ ಭಕ್ತರೊಬ್ಬರ ಮಗುವೊಂದು ಹಿಡಿದಿದ್ದ ಬಲೂನು ಸ್ಫೋಟವಾಗಿದ್ದು, ಆ ಶಬ್ದಕ್ಕೆ ಗಾಬರಿಯಾದ ಆನೆ ತನ್ನ ಬಳಿ ನಿಂತಿದ್ದ ಮಾವುತನನ್ನು ತನ್ನ ಸೊಂಡಿಲಿನಿಂದ ಹೊಡೆದಿದೆ. ಆನೆಯ ಹೊಡೆತದ ರಭಸಕ್ಕೆ  ಸಿಕ್ಕ ಮಾವುತ ಏಕಾಏಕಿ ಸಮೀಪದ ಕಬ್ಬಿಣದ ಗೇಟ್ ಮೇಲೆ ಬಿದ್ದಿದ್ದು, ಮಾವುತ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಟಿಟಿಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಮಾವುತನನ್ನು ಪರೀಕ್ಷಿಸಿದ ವೈದ್ಯರು ಆತನ  ಕಾಲಿನ ಮೂಳೆಗೆ ಪೆಟ್ಟಾಗಿದ್ದು, ದೇಹದ ಕೆಲ ಭಾಗಗಳಿಗೆ ಗಾಯಗಳಾಗಿವೆ. ಆದರೆ ಆತನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ.

ಭಾನುವಾರವಾದ್ದರಿಂದ ದೇವಾಲಯಕ್ಕೆ ಆಗಮಿಸಿದ್ದ ಭಕ್ತರ ಸಂಖ್ಯೆ ಕೊಂಚ ಹೆಚ್ಚೇ ಇತ್ತು. ಭಕ್ತರನ್ನು ಆಶೀರ್ವದಿಸಲು ಲಕ್ಷ್ಮಿ ಮತ್ತು ಅವನಿಜ ಎಂಬ ಆನೆಗಳನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ.  ಘಟನೆಯಿಂದಾಗಿ ಅಲ್ಲಿ ನೆರೆದಿದ್ದ ಭಕ್ತ ಸಮೂಹ ಕೆಲ ಕಾಲ ಆತಂಕಕ್ಕೀಡಾಗಿತ್ತು. ಕೂಡಲೇ ಪಕ್ಕದಲ್ಲೇ ಇದ್ದ ಮತ್ತೋರ್ವ ಮಾವುತ ಆನೆಯನ್ನು ಸಮಾಧಾನಗೊಳಿಸಿದ್ದಾನೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಟಿಟಿಡಿ ಉಪ ಕಾರ್ಯನಿರ್ವಾಹಕ ಅಧಿಕಾರಿ ಕೋದಂಡ ರಾಮರಾವ್ ಅವರು, ಬಲೂನು ಸ್ಫೋಟದ ಶಬ್ದ ಕೇಳಿ ಆನೆ ಗಾಬರಿಯಾಗಿದೆ. ಹೀಗಾಗಿ ಮಾವುತನ ಮೇಲೆ ದಾಳಿ ಮಾಡಿದೆ.  ಪ್ರತಿನಿತ್ಯದಂತೆ ದೇವಾಲಯಕ್ಕೆ ಆಗಮಿಸುವ ಭಕ್ತರನ್ನು ಆಶೀರ್ವದಿಸಲು ಎರಡು ಆನೆಗಳನ್ನು ನಿಯೋಜಿಸಲಾಗಿತ್ತು. ಈ ವೇಳೆ ಘಟನೆ ನಡೆದಿದ್ದು, ಭಕ್ತರು ಆತಂಕಗೊಳ್ಳಬೇಕಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com