

ನವದೆಹಲಿ: ಎನ್ ಡಿಎ ಸರ್ಕಾರ ಪ್ರಾಮಾಣಿಕರಿಂದ, ಪ್ರಮಾಣಿಕರಿಗಾಗಿ ಹಾಗೂ ಪ್ರಮಾಣಿಕರಿಗೋಸ್ಕರವಾಗಿದ್ದು, ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಮುಂದುವರೆಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.
ಕೌಶಲ್ಯ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ ಬಳಿಕ ಕಾನ್ಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಉತ್ತರ ಪ್ರದೇಶವನ್ನು ನೋಡುವ ಅವಕಾಶ ನನಗೆ ಸಿಕ್ಕಿದೆ. ಉತ್ತರ ಪ್ರದೇಶದಲ್ಲಾಗುತ್ತಿರುವ ಪರಿವರ್ತನೆಯನ್ನು ನೋಡುತ್ತಿದ್ದೇನೆ. ಯುವಕರೇ ದೇಶದ ಬಹುದೊಡ್ಡ ಶಕ್ತಿಯಾಗಿದ್ದು, ಯುವಕರು ಕೈಜೋಡಿಸಿ ಕೆಲಸ ಮಾಡಿದ್ದೇ ಆದರೆ, ಭಾರತದ ಅಭಿವೃದ್ಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚುತ್ತಲಿದ್ದು, ಭಾರತದಲ್ಲಿ 35ರ ವಯಸ್ಸಿನ ಜನಸಂಖ್ಯೆ ಹೆಚ್ಚಾಗಿದೆ. ಇದು ಮುಂದೆ ಹೆಚ್ಚಾಗುತ್ತಲೇ ಇರುತ್ತದೆ. ನಮ್ಮ ಯುವಕರೇ ದೇಶದ ದೊಡ್ಡ ಶಕ್ತಿಯಾಗಿದ್ದು, ಯುವಕರು ದೇಶದ ಅಭಿವೃದ್ಧಿಯಲ್ಲಿ ಬಹುದೊಡ್ಡ ಪಾತ್ರವಹಿಸಿದ್ದಾರೆ.
ಪ್ರತಿಪಕ್ಷಗಳು ತಮ್ಮದೇ ಆದ ಸಮಸ್ಯೆಗಳ ಕುರಿತು ತಲೆಕೆಡಿಸಿಕೊಂಡಿವೆ. ಜನರ ಸಮಸ್ಯೆ ಆಲಿಸಲು ಅವರಿಗೆ ಸಮಯವಿಲ್ಲ. ಆದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರ ಬಡವರಿಗಾಗಿ ಮುಡಿಪಾಗಿದೆ. ನಮ್ಮ ಸರ್ಕಾರ ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದೆ. ಭಾರತವನ್ನು ಉತ್ತಮ ರಾಷ್ಟ್ರವಾಗಿ ನಿರ್ಮಾಣ ಮಾಡಲು ನಮ್ಮ ಸರ್ಕಾರ ಏನೆಲ್ಲಾ ಮಾಡಬಹುದೋ ಆ ಎಲ್ಲಾ ಕೆಲಸವನ್ನು ಮಾಡುತ್ತಿದೆ.
ಭ್ರಷ್ಟಾಚಾರ ಹಾಗೂ ಕಪ್ಪುಹಣವನ್ನು ನಿಯಂತ್ರಿಸುವುದೇ ನಮ್ಮ ಉದ್ದೇಶವಾಗಿದೆ. ಆದರೆ, ಇತರರಿಗೆ ಸಂಸತ್ತು ಕಾರ್ಯನಿರ್ವಹಿಸದಂತೆ ಮಾಡುವುದೇ ಉದ್ದೇಶವಾಗಿದೆ ಎಂದು ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ಸಂಸತ್ತು ಕಾರ್ಯನಿರ್ವಹಿಸಲು ಬಿಡಿ ಎಂದು ಸ್ವತಃ ರಾಷ್ಟ್ರಪತಿಗಳು ಹೇಳಿದ್ದರೂ, ಅವರನ್ನು ಮಾತನ್ನು ಬದಿಗೊತ್ತಿ ವಿರೋಧ ಪಕ್ಷಗಳು ಸಂಸತ್ತು ಕೆಲಸ ಮಾಡದಂತೆ ಮಾಡಿವೆ. ಭ್ರಷ್ಟಾಚಾರಿಗಳಿಗೆ ಶಿಕ್ಷೆ ನೀಡುವ ಸರ್ಕಾರವನ್ನು ಮೊದಲ ಬಾರಿಗೆ ದೇಶದ ಜನತೆ ನೋಡುತ್ತಿದ್ದಾರೆ. ಜನರಿಗೆ ಮೋಸ ಮಾಡುವ ಜನರನ್ನು ನಮ್ಮ ಸರ್ಕಾರ ಸುಮ್ಮನೆ ಬಿಡುವುದಿಲ್ಲ.
ಉತ್ತರ ಪ್ರದೇಶ ಬದಲಾಗುವ ಸಮಯ ಇದೀಗ ಬಂದಿದೆ. ನಿಮ್ಮ ಮತಗಳ ಮೂಲಕ ರಾಜ್ಯವನ್ನು ಬದಲಾವಣೆ ಮಾಡುವ ಅವಕಾಶ ಬಂದಿದೆ. ಭಾರತ ಪ್ರಮಾಣಿಕವಾಗಿ ಮುನ್ನಡೆಯಬೇಕೆಂದು ಸರ್ವಪಕ್ಷ ಸಭೆಯಲ್ಲಿ ಹೇಳಿದ್ದೇನೆ. ರಾಜ್ಯ ಹಾಗೂ ಕೇಂದ್ರ ಒಟ್ಟಾಗಿ ಕೆಲಸ ಮಾಡಬೇಕಿದ್ದು, ಇದರಿಂದ ದೇಶ ಅಭಿವೃದ್ಧಿ ಕಾಣಲಿದೆ.
ಗುಂಡಾ ರಾಜಕೀಯದಿಂದ ಉತ್ತರ ಪ್ರದೇಶ ಬೇಸತ್ತು ಹೋಗಿದೆ. ಮನಬಂದಂತೆ ನಡೆದುಕೊಳ್ಳುವುದು, ಭ್ರಷ್ಟಾಚಾರ ಎಂಬುದು ಕಾಂಗ್ರೆಸ್ ಪಕ್ಷ ಸರ್ಕಾರ ನಡೆಸುವ ಶೈಲಿಯಾಗಿದೆ. 70-72 ಗ್ರಾಮಗಳನ್ನು ಬಿಟ್ಟರೆ ಉಳಿದ 1600 ಗ್ರಾಮಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಶೀಘ್ರದಲ್ಲೇ ಉಳಿದ 70 ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಈ ಹಿಂದ ಸಾಕಷ್ಟು ವರ್ಷಗಳ ಕಾಲ ಸರ್ಕಾರ ನಡೆಸಿದ ಪಕ್ಷಕ್ಕೆ ಇದು ಸಾಧ್ಯವಾಗಿರಲಿಲ್ಲ. ಪ್ರತೀಯೊಂದು ಕುಟುಂಬಕ್ಕು ಗ್ಯಾಸ್ ಸಿಲಿಂಡರ್ ಸಂಪರ್ಕ ಒದಗಿಸುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ತಿಳಿಸಿದೆ. ಆದರೆ, ನಮ್ಮ ಸರ್ಕಾರ ಇನ್ನು ಬಹಳ ಸುಲಭವಾಗಿ ಪ್ರತೀಯೊಬ್ಬರಿಗೂ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ನೀಡಿದೆ.
ಭ್ರಷ್ಟರ ವಿರುದ್ದ ಸರ್ಕಾರ ಕ್ರಮಕೈಗೊಳ್ಳುತ್ತಿದೆ. ದೇಶದಾದ್ಯಂತ ಭ್ರಷ್ಟರು ಸಿಕ್ಕಿಹಾಕಿಕೊಳ್ಳುತ್ತಿರುವುದನ್ನು ಪ್ರತೀ ನಿತ್ಯ ನೋಡಬಹುದು. ಈ ಹಿಂದೆ ಇಷ್ಟೊಂದು ಭ್ರಷ್ಟರು ಸಿಕ್ಕಿಹಾಕಿಕೊಂಡಿರುವುದನ್ನು ಎಂದಾದರೂ ನೋಡಿದ್ದೀರಾ? ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಯಾರು ಕ್ರಮಕೈಗೊಳ್ಳುತ್ತಿದ್ದಾರೆಂಬುದನ್ನು ಇಂದು ನೀವೇ ನೋಡಬಹುದು. ಈ ಹಿಂದೆ ಹೇಳಿದ್ದನ್ನೇ ಈಗಲೂ ಮತ್ತೆ ಹೇಳುತ್ತಿದ್ದೇನೆ. ನೋಟು ನಿಷೇಧದಿಂದ ಸಾಮಾನ್ಯ ಜನರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿರಬಹುದು. ಆದರೆ, ಈ ಸಮಸ್ಯೆ ಕೆಲವೇ ದಿನಗಳಲ್ಲಿ ದೂರಾಗಲಿದೆ. ಈ ಹಿಂದಿಗೆ ಹೋಲಿಕೆ ಮಾಡಿದರೆ, ಇದೀಗ ಪರಿಸ್ಥಿತಿ ಸುಧಾರಿಸಿದೆ. ಹೀಗೆಯೇ ದಿನ ಕಳೆಯುತ್ತಿದ್ದಂತೆ ಸಮಸ್ಯೆ ಬಗೆಹರಿಯಲಿದೆ. ಡಿಜಿಟಲೀಕರಣದಿಂದ ಕಪ್ಪುಹಣ ನಿಯಂತ್ರಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.