

ಮಲಪ್ಪುರಂ: ಕಾಳಧನಿಕರ ವಿರುದ್ಧ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಕೇರಳದ ಮಲಪ್ಪುರಂನಲ್ಲಿ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಬರೊಬ್ಬರಿ 266 ಕೋಟಿ ನಗದನ್ನು ಜಪ್ತಿ ಮಾಡಿದ್ದಾರೆ.
ದಾಖಲೆ ಇಲ್ಲದೇ ಭಾರಿ ಪ್ರಮಾಣದ ಹಣವನ್ನು ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ ಎಂಬ ಆರೋಪದ ಮೇರೆಗೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ವಿವಿಧ ಖಾತೆಗಳಿಗೆ ಜಮೆಯಾಗಿದ್ದ ಸುಮಾರು 266 ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ. ಪರಿಶೀಲನೆ ವೇಳೆ ಈ ಭಾರಿ ಪ್ರಮಾಣದ ಹಣಕ್ಕೆ ಯಾವುದೇ ಸೂಕ್ತ ರೀತಿಯ ದಾಖಲೆಗಳಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ನವೆಂಬರ್ 10ರಿಂದ 14ರವರೆಗೂ ಬ್ಯಾಂಕಿಗೆ ಅಪಾರ ಪ್ರಮಾಣದ ಹಳೆಯ ನೋಟುಗಳು ಹರಿದುಬಂದಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಈ ಹಣಕ್ಕೆ ಸೂಕ್ತ ದಾಖಲೆಗಳನ್ನು ಪಡೆಯದೇ ಬ್ಯಾಂಕ್ ಸಿಬ್ಬಂದಿಗಳು ಹಣವನ್ನು ಜಮೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಾಳಧನಿಕರಿಂದ ಕಮಿಷನ್ ಪಡೆದು ಅಧಿಕಾರಿಗಳು ಈ ಹಣವನ್ನು ಜಮೆ ಮಾಡಿಕೊಂಡರೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಜಪ್ತಿ ಮಾಡಲಾದ ಹಣಕ್ಕೆ ಸೂಕ್ತ ದಾಖಲೆ ನೀಡುವಂತೆ ಬ್ಯಾಂಕ್ ಸಿಬ್ಬಂದಿಗೆ ಸಿಬಿಐ ಅಧಿಕಾರಿಗಳು ಸೂಚಿಸಿದ್ದಾರೆ.