ಮಣಿಪುರದಲ್ಲಿ ಸಿಲಿಂಡರ್ ಬೆಲೆ 3 ಸಾವಿರ, ಲೀಟರ್ ಪೆಟ್ರೋಲ್ 300 ರು.!

ಮಣಿಪುರ ಸರ್ಕಾರದ ನೂತನ ಜಿಲ್ಲೆಗಳನ್ನು ರಚಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ನಾಗಾಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ರಾಜಧಾನಿ ಇಂಫಾಲದಿಂದ ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನೇ ಬಂದ್ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಇಂಫಾಲ: ಮಣಿಪುರ ಸರ್ಕಾರದ ನೂತನ ಜಿಲ್ಲೆಗಳನ್ನು ರಚಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ನಾಗಾಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ರಾಜಧಾನಿ ಇಂಫಾಲದಿಂದ ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ  ಪ್ರಮುಖ ರಸ್ತೆಗಳನ್ನೇ ಬಂದ್ ಮಾಡಿದ್ದಾರೆ.

ಕಳೆದ ಅಕ್ಟೋಬರ್​ನಲ್ಲಿ ಮಣಿಪುರ ಸರ್ಕಾರ ಎರಡು ಹೊಸ ಜಿಲ್ಲೆಗಳನ್ನು ಅಸ್ತಿತ್ವಕ್ಕೆ ತರುವುದಾಗಿ ಘೊಷಿಸಿತ್ತು. ಆದರೆ ನಾಗಾ ಜನರು ಪರಂಪರಾಗತವಾಗಿ ವಾಸಿಸುತ್ತಿರುವ ಪ್ರದೇಶವನ್ನು ನಾಗಾಲಿಮ್ ಅಥವಾ ಸೇನಾಪತಿ ಜಿಲ್ಲೆ  ಎಂಬ ಜಿಲ್ಲೆಯನ್ನಾಗಿ ಘೊಷಿಸುವಂತೆ ನಾಗಾ ಸಮುದಾಯದವರು ಪಟ್ಟು ಹಿಡಿದಿದ್ದರು. ಆದರೆ ಮಣಿಪುರ ಸರ್ಕಾರ ಈ ಬಗ್ಗೆ ಆಸಕ್ತಿ ತೋರಲಿಲ್ಲ. ಬದಲಿಗೆ 7 ಹೊಸ ಜಿಲ್ಲೆಗಳನ್ನು ಘೋಷಣೆ ಮಾಡಿತು. ಸರ್ಕಾರದ ಈ ನಡೆ ಪ್ರತಿಭಟನಾ  ನಿರತ ನಾಗಾಗಳನ್ನು ಕೆರಳಿಸಿದ್ದು, ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಹೊಸ ಜಿಲ್ಲೆಗಳನ್ನು ರಚಿಸುವ ಮೂಲಕ ಮೂಲ ನಿವಾಸಿಗಳಾದ ನಮ್ಮ ಭೂಮಿಯನ್ನು ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ನಾಗಾ ಜನರ  ಪ್ರಮುಖ ಆರೋಪವಾಗಿದೆ.

ಬಳಿಕ ರಾಜ್ಯದ ಹಲವೆಡೆ ಹಿಂಸಾಚಾರಗಳು ನಡೆದು, ಇಂಫಾಲದಲ್ಲಿ ಕರ್ಫ್ಯೂ ಹೇರಲಾಗಿತ್ತು. ರಾಷ್ಟ್ರೀಯ ಹೆದ್ದಾರಿ 37 ಹಾಗೂ 2 ಮೂಲಕ ಮಣಿಪುರಕ್ಕೆ ಅಗತ್ಯ ವಸ್ತುಗಳ ಪೂರೈಕೆಯಾಗುತ್ತಿತ್ತು. ಆದರೆ ನವೆಂಬರ್ 1ರಂದು ನಾಗಾ  ಪ್ರತಿಭಟನಾಕಾರರು ಇದನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ. ಹೊರ ರಾಜ್ಯಗಳೊಂದಿಗೆ ಸಂಪರ್ಕ ಬೆಸೆಯುವ ರಾಷ್ಟ್ರೀಯ ಹೆದ್ದಾರಿಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿದ್ದು, ಅಗತ್ಯ ವಸ್ತುಗಳ ಪೂರೈಕೆ ವ್ಯತ್ಯಯವಾಗಿದೆ. ದಿನ  ಬಳಕೆ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದ್ದು, ಜನರು ತತ್ತರಿಸಿದ್ದಾರೆ. ಬೇರೆ ರಾಜ್ಯಗಳಿಂದ ಮಣಿಪುರಕ್ಕೆ ಆಗಮಿಸಿರುವ ಸಾವಿರಾರು ಲಾರಿಗಳು ಹೆದ್ದಾರಿ ಮೇಲೆ ನಿಂತಿದ್ದು, ನಿತ್ಯ ಬಳಕೆ ವಸ್ತುಗಳಿಲ್ಲದೇ ಜನ  ಕಾಂಗಾಲಾಗಿದ್ದಾರೆ. ಪೆಟ್ರೋಲ್ ಗೆ ವ್ಯಾಪಕ ಅಭಾವ ಎದುರಾದ ಕಾರಣ ಪೆಟ್ರೋಲ್ ಬೆಲೆ ಗಗನಕ್ಕೇರಿದ್ದು, ಪ್ರತೀ ಲೀಟರ್ ಪೆಟ್ರೋಲ್ 300ರು.ಗೆ ಏರಿಕೆಯಾಗಿದೆ. ನಿತ್ಯ ಬಳಕೆಯ ಅಡುಗೆ ಸಿಲಿಂಡರ್ ದರ 3 ಸಾವಿರಕ್ಕೆ  ಏರಿಕೆಯಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನು ರಾಜಕೀಯ ವಲಯದಲ್ಲಿ ನಾಗಾ ಸಮುದಾಯದವರು ಹೆಚ್ಚಾಗಿ ಗುರುತಿಸಿಕೊಂಡಿದ್ದು, ಇವರ ವಿರುದ್ಧದ ಸಮುದಾಯ ಎಂದು ಹೇಳಲಾಗುತ್ತಿರುವ ಮೈತೈ ಸಮುದಾಯದವರೂ ನಾಗಲಿಮ್ ಜಿಲ್ಲೆಗೆ ವ್ಯಾಪಕ ವಿರೋಧ  ವ್ಯಕ್ತಪಡಿಸುತ್ತಿದ್ದಾರೆ. ಇದೇ ಮಣಿಪುರದ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ವೈದ್ಯಕೀಯ ಸೇವೆ ಜನರಿಗೆ ಲಭ್ಯವಾಗುತ್ತಿಲ್ಲ. ತುರ್ತು ಚಿಕಿತ್ಸೆಯೂ ಸಿಗದೇ ಜನರು ಕಂಗಾಲಾಗಿದ್ದಾರೆ. ಜೀವ ರಕ್ಷಣ ಔಷಧಗಳ ಪೂರೈಕೆಯೂ ಸ್ಥಗಿತಗೊಂಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಗೃಹ ಖಾತೆಯ  ಸಹಾಯಕ ಸಚಿವ ಕಿರಣ್ ರಿಜಿಜು ಮಣಿಪುರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದರು. ಕೇಂದ್ರ ಸರ್ಕಾರದಿಂದ ಸಹಾಯ  ನೀಡುವುದಾಗಿ ಭರವಸೆ ನೀಡಿದ್ದಾರೆ. ಸೇನಾ ಮುಖ್ಯಸ್ಥ ದಲ್ಬಿರ್ ಸಿಂಗ್ ಅವರು ಶನಿವಾರ ಇಂಫಾಲ​ಗೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com