ಕೋಮು ಗಲಭೆ ವರದಿ: ಪ.ಬಂಗಾಳ ಸರ್ಕಾರದಿಂದ ಜೀ ನ್ಯೂಸ್ ವಿರುದ್ಧ ದೂರು ದಾಖಲು!

ಕಳೆದ ಡಿಸೆಂಬರ್ 12ರಂದು ದುಲಾಘಡ್ ನಲ್ಲಿ ನಡೆದಿದ್ದ ಕೋಮುಗಲಭೆಯ ವರದಿ ಮಾಡಿದ್ದ ಜೀ ನ್ಯೂಸ್ ಸಂಸ್ಥೆ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಪೊಲೀಸ್ ದೂರು ದಾಖಲಿಸಿದೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೋಲ್ಕತಾ: ಕಳೆದ ಡಿಸೆಂಬರ್ 12ರಂದು ದುಲಾಘಡ್ ನಲ್ಲಿ ನಡೆದಿದ್ದ ಕೋಮುಗಲಭೆಯ ವರದಿ ಮಾಡಿದ್ದ ಜೀ ನ್ಯೂಸ್ ಸಂಸ್ಥೆ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಪೊಲೀಸ್ ದೂರು ದಾಖಲಿಸಿದೆ ಎಂದು ಹೇಳಲಾಗುತ್ತಿದೆ.

ಜೀ ನ್ಯೂಸ್ ಸಂಸ್ಥೆಯ ಸಂಪಾದಕ ಸುಧೀರ್ ಚೌದರಿ, ಸಂಸ್ಥೆಯ ಪಶ್ಚಿಮ ಬಂಗಾಳ ವರದಿಗಾರ್ತಿ ಪೂಜಾ ಮೆಹ್ತಾ ಹಾಗೂ ಕ್ಯಾಮೆರಾಮೆನ್ ತನ್ಮಯ್ ಮುಖರ್ಜಿ ವಿರುದ್ಧ ಸೆಕ್ಷನ್ 153-ಎ (ದ್ವೇಷ ಪ್ರಚಾರ) ಅಡಿಯಲ್ಲಿ ಜಾಮೀನು ರಹಿತ  ದೂರು ದಾಖಲು ಮಾಡಲಾಗಿದೆ.  ಕಳೆದ ಡಿಸೆಂಬರ್ 12ರಂದು ಪ್ರವಾದಿ ಮಹಮದ್ ಜನ್ಮದಿನ ಆಚರಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ವಿವಿಧೆಡೆ ಹಿಂಸಾಚಾರ ಭುಗಿಲೆದ್ದಿತ್ತು. ಈ ಪೈಕಿ ದುಲಾಘಡ್ ನಲ್ಲಿ ನಡೆಯುತ್ತಿದ್ದ  ಹಿಂಸಾಚಾರವನ್ನು ಜೀ ನ್ಯೂಸ್ ಸಂಸ್ಥೆ ವರದಿ ಮಾಡಿತ್ತು. ಇದೀಗ ಇದೇ ವಿಚಾರವಾಗಿ ಸುದ್ದಿ ಸಂಸ್ಥೆಯ ವಿರುದ್ಧ ಮಮತಾ ಬ್ಯಾನರ್ಜಿ ಸರ್ಕಾರ ದೂರು ದಾಖಲಿಸಿದೆ.

ಇನ್ನು ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಜೀ ನ್ಯೂಸ್ ಸಂಪಾದಕ ಸುಧೀರ್ ಚೌದರಿ ಅವರು ಟೀಕಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ತನ್ನ ಆಡಳಿತ  ವೈಫಲ್ಯವನ್ನು ಮರೆಮಾಚಲು ಮಾಧ್ಯಮಗಳ ಮೇಲೆ ಗೂಬೆ ಕೂರಿಸುತ್ತಿದೆ. ಮಾಧ್ಯಮಗಳ ವಿರುದ್ಧದ ನಿರ್ಧಾರ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಮಾಧ್ಯಮಗಳ ವಿರುದ್ಧದ ಅಸಹಿಷ್ಣುತೆಯನ್ನು  ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸರ್ಕಾರದ ಕ್ರಮಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ದೂರು ದಾಖಲಾಗಿರುವ ಸಂಕ್ರೈಲ್ ಪೊಲೀಸ್ ಠಾಣೆಯ ಪೊಲೀಸರು ಮಾತ್ರ ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಗಲಭೆ  ಸಂಬಂಧ ಈ ವರೆಗೂ 30 ಎಫ್ ಐಆರ್ ಗಳನ್ನು ದಾಖಲು ಮಾಡಲಾಗಿದೆ. ಆದರೆ ದುಲಾಘಡ್ ಗಲಭೆ ಸಂಬಂಧ ವಿವರ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪ್ರಸ್ತುತ ದುಲಾಘಡ್ ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು,  ದುಲಾಘಡ್ ನಾದ್ಯಂತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲೂ ಬ್ಯಾರಿಕೇಡ್ ಹಾಕಲಾಗಿದ್ದು, ಯಾವುದೇ ಮಾಧ್ಯಮ ಪ್ರತಿನಿಧಿಗಳಿಗೂ ಗ್ರಾಮ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗುತ್ತಿದೆ  ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com