ನವದೆಹಲಿ: ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಾಧೀಶರಾಗಿ ಜಗದೀಶ್ ಸಿಂಗ್ ಖೇಹರ್ ಅವರನ್ನು ನೇಮಕ ಮಾಡುವ ಪ್ರಕ್ರಿಯೆಗೆ ತಡೆ ತರಬೇಕೆಂದು ವಕೀಲರ ಸಂಘವೊಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ತೀರ್ಮಾನದಂತೆ ಅಥವಾ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರ ನೇಮಕಾತಿಯನ್ನು ಅನರ್ಹಗೊಳಿಸುವ ಸಂಬಂಧ ಸಲ್ಲಿಸಲಾದ ಅರ್ಜಿಯಲ್ಲಿ ಯಾವುದೇ ಅರ್ಹತೆಯಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಾಂಗದ ಪಾರದರ್ಶಕತೆ ಮತ್ತು ಸುಧಾರಣೆ ಅಭಿಯಾನಕ್ಕೆ ರಾಷ್ಟ್ರೀಯ ವಕೀಲರ ಸಂಘ ಸುಪ್ರೀಂ ಕೋರ್ಟ್ ಮೊರೆ ಹೋಗಿ ಜಗದೀಶ್ ಸಿಂಗ್ ಖೇಹರ್ ಅವರನ್ನು ಮುಂದಿನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡುವುದಕ್ಕೆ ತಡೆ ತರಬೇಕೆಂದು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾದ ನಾಗರಿಕ ರಿಟ್ ಅರ್ಜಿಯಲ್ಲಿ ವಕೀಲರ ಸಂಘ, ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಖೇಹರ್ ಗಿಂತ ಹಿರಿಯರಾಗಿದ್ದು ಅವರನ್ನು ಭಾರತದ 44ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡುವಂತೆ ಒತ್ತಾಯಿಸಿದ್ದಾರೆ.
ನ್ಯಾಯಮೂರ್ತಿ ಖೆಹರ್ ವಕೀಲರ ಸಣ್ಣಪುಟ್ಟ ತಪ್ಪುಗಳನ್ನು ಎತ್ತಿ ತೋರಿಸುತ್ತಿದ್ದು, ಹಿರಿಯ ವಕೀಲರ ಪರವಾಗಿ ನಿಲ್ಲುತ್ತಾರೆ ಎಂದು ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಜಗದೀಶ್ ಸಿಂಗ್ ಖೇಹರ್ ನೇಮಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈ ತಿಂಗಳ ಆರಂಭದಲ್ಲಿ ಒಪ್ಪಿಗೆ ನೀಡಿದ್ದರು.
ನ್ಯಾಯಮೂರ್ತಿ ಖೇಹರ್ ಅವರು ಜನವರಿ 4ರಂದು ತಿರಾತ್ ಸಿಂಗ್ ಠಾಕೂರ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.