ಪಠಾಣ್ ಕೋಟ್ ಮಾದರಿಯ ದಾಳಿ ಮುಂದುವರಿಯಲಿದೆ: ಉಗ್ರ ಹಫೀಸ್ ಸಯೀದ್

ಪಠಾಣ್ ಕೋಟ್ ಮಾದರಿಯ ಇನ್ನಷ್ಟು ದಾಳಿಗಳನ್ನು ಎದುರಿಸಲು ಸಜ್ಜಾಗಿರಿ ಎಂದು ಉಗ್ರಗಾಮಿ ಹಫೀಜ್ ಸಯೀದ್ ಬೆದರಿಕೆ ಹಾಕಿರುವುದು...
ಮುಂಬೈಯ 2008ರ ದಾಳಿಯ ರೂವಾರಿ ಲಷ್ಕರ್ ಇ ತಯ್ಯಬಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಸ್ ಸಯೀದ್
ಮುಂಬೈಯ 2008ರ ದಾಳಿಯ ರೂವಾರಿ ಲಷ್ಕರ್ ಇ ತಯ್ಯಬಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಸ್ ಸಯೀದ್

ನವದೆಹಲಿ: ಪಠಾಣ್ ಕೋಟ್ ಮಾದರಿಯ ಇನ್ನಷ್ಟು ದಾಳಿಗಳನ್ನು ಎದುರಿಸಲು ಸಜ್ಜಾಗಿರಿ ಎಂದು ಉಗ್ರಗಾಮಿ ಹಫೀಜ್ ಸಯೀದ್ ಬೆದರಿಕೆ ಹಾಕಿರುವುದು ಭಾರತ-ಪಾಕಿಸ್ತಾನ ನಡುವಣ ಸೌಹಾರ್ದ ಮಾತುಕತೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಸಾಧ್ಯತೆಯಿದೆ.

ಉಗ್ರ ಹಫೀಸ್ ಸಯೀದ್ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ನಿನ್ನೆ ರ್ಯಾಲಿಯೊಂದರಲ್ಲಿ ಮಾತನಾಡಿ, ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯನ್ನು ಪ್ರಸ್ತಾಪಿಸಿ ಭಾರತ ಮುಂದಿನ ದಿನಗಳಲ್ಲಿ ಅಂತಹ ಮತ್ತಷ್ಟು ದಾಳಿಗಳನ್ನು ಎದುರಿಸಲು ಸಜ್ಜಾಗಲಿ ಎಂದು ಹೇಳಿದ್ದಾನೆ.

ಪಠಾಣ್ ಕೋಟ್ ದಾಳಿಗೆ ಪಾಕಿಸ್ತಾನ ಉಗ್ರಗಾಮಿಗಳು ಕಾರಣ ಎಂದು ಆರೋಪಿಸಿದ್ದ ಭಾರತ ಸರ್ಕಾರ ಅದನ್ನು ಸಾಬೀತುಪಡಿಸಲು ಸಾಕ್ಷ್ಯ ಒದಗಿಸಿತ್ತು. ಪಠಾಣ್ ಕೋಟ್ ವಾಯುನೆಲೆ ಮೇಲೆ ಆರು ಮಂದಿ ಉಗ್ರರು ದಾಳಿ ನಡೆಸಿದ್ದು, ಅವರು ಪಾಕಿಸ್ತಾನ ಮೂಲದ ಜೈಶ್ ಇ ಮೊಹಮ್ಮದ್ ಸಂಘಟನೆಯವರಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಭಾರತ-ಪಾಕ್ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಭಾರತ ತಿಳಿಸಿದೆ.ಪಠಾಣ್ ಕೋಟ್ ಮೇಲಿನ ದಾಳಿ ನಂತರ ಉಭಯ ದೇಶಗಳ ನಡುವಣ ಮಾತುಕತೆ ಮುರಿದುಬಿದ್ದಿತ್ತು.

ದಾಳಿಯ ಕುರಿತು ಇನ್ನಷ್ಟು ಸಾಕ್ಷಿಗಳ ಅಗತ್ಯವಿದೆ ಎಂದು ಪಾಕಿಸ್ತಾನ ಕೇಳಿದ್ದು, ರದ್ದುಗೊಂಡ ಮಾತುಕತೆ ಪುನಃ ನಡೆಯಲು ಎರಡೂ ದೇಶಗಳಿಗೆ ಸೂಕ್ತ ದಿನಾಂಕ ಸಿಗುತ್ತಿಲ್ಲ ಎಂದು ಹೇಳಿದೆ.

ಗೃಹ ಸಚಿವ ರಾಜನಾಥ್ ಸಿಂಗ್ ನಿನ್ನೆ ಹೇಳಿಕೆ ನೀಡಿ, ಭಾರತದಲ್ಲಿ ನಡೆಯುವ ಅನೇಕ ಉಗ್ರಗಾಮಿ ದಾಳಿಗಳು ಪಾಕಿಸ್ತಾನದಿಂದ ಹುಟ್ಟಿಕೊಳ್ಳುತ್ತಿದ್ದು, ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳಲು ಪಾಕಿಸ್ತಾನ ಪ್ರಾಮಾಣಿಕತೆ ಪ್ರದರ್ಶಿಸಬೇಕು ಎಂದು ಹೇಳಿದ್ದರು.
ಹಫೀಸ್ ಸಯೀದ್ 2008ರ 26/11ರ ಮುಂಬೈ ದಾಳಿಯ ರೂವಾರಿಯಾಗಿದ್ದು, ಅದರಲ್ಲಿ 166 ಮಂದಿ ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com