ಹೈದ್ರಾಬಾದ್: ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಹೊರಹೊಮ್ಮಿದ ಬಳಿಕ ನಡೆದ ಮೊದಲ ಗ್ರೇಟರ್ ಹೈದ್ರಾಬಾದ್ ಪಾಲಿಕೆ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್ ) ಐತಿಹಾಸಿಕ ಗೆಲುವು ಸಿಕ್ಕಿದೆ.
ಗ್ರೇಟರ್ ಹೈದ್ರಾಬಾದ್ ಪಾಲಿಕೆ ಚುನಾವಣೆಯಲ್ಲಿ 150 ವಾರ್ಡ್ ಗಳಲ್ಲಿ 110 ಸ್ಥಾನ ಗಳಿಸುವುದರ ಮೂಲಕ ಟಿಆರ್ ಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಇನ್ನು ಎಐಎಂಐಎಂ 32 ಸ್ಥಾನ ಗಳಿಸಿದ್ದರೆ, ಬಿಜೆಪಿ ಹಾಗೂ ಟಿಡಿಪಿ ತಲಾ ಆರು ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಕಾಂಗ್ರೆಸ್ ಗೆ ಒಂದು ಸ್ಥಾನ, ಮತ್ತೊಂದು ಸ್ಥಾನ ಪಕ್ಷೇತರನ ಪಾಲಾಗಿದೆ.
2009ರಲ್ಲಿ ಗ್ರೇಟರ್ ಹೈದ್ರಾಬಾದ್ ಪಾಲಿಕೆಯಾಗಿ ರಚನೆಯಾದ ಬಳಿಕ ನಡೆದ ಚುನಾವಣೆಯಲ್ಲಿ ಎಐಎಂಐಎಂ 43 ಸ್ಥಾನ ಮತ್ತು ಕಾಂಗ್ರೆಸ್ 52 ಸ್ಥಾನ ಗಳಿಸಿ ಅಧಿಕಾರಕ್ಕೇರಿದ್ದವು,
ಆದರೆ ಈ ಬಾರಿ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಎಐಎಂಐಎಂ ಧೂಳೀಪಟಗೊಂಡಿದ್ದು, ಟಿಆರ್ ಎಸ್ ಭರ್ಜರಿ ಗೆಲವು ಸಾಧಿಸಿದೆ.