ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿರುವುದು (ಕೃಪೆ: ಟ್ವಿಟರ್ )
ದೇಶ
ಸಂಭ್ರಮಾಚರಣೆ ವೇಳೆ ಗುಂಡು ಹಾರಾಟ; ಆ ಗುಂಡು ಬಾಲಕನ ಪ್ರಾಣವನ್ನೇ ಕಸಿಯಿತು!
ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಕಾರ್ಯಕರ್ತರು ಸ್ಥಳೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿ ಆಕಾಶದತ್ತ ಗುಂಡು ಹಾರಿಸಿ ಸಂಭ್ರಮಾಚರಣೆ...
ಶಾಮ್ಲಿ: ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಕಾರ್ಯಕರ್ತರು ಸ್ಥಳೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿ ಆಕಾಶದತ್ತ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದು,ಈ ವೇಳೆ ಗುಂಡು ತಾಗಿ 9ರ ಹರೆಯದ ಬಾಲಕನೊಬ್ಬ ಸಾವಿಗೀಡಾದ ಘಟನೆ ವರದಿಯಾಗಿದೆ.
ಪೊಲೀಸರು ಅಲ್ಲೇ ಕಾರ್ಯ ನಿರತರಾಗಿದ್ದರೂ ಪಂಚಾಯತ್ ಚುನಾವಣೆಯಲ್ಲಿ ನಫೀಸಾ ಎಂಬಾಕೆ ಗೆಲವು ಸಾಧಿಸಿದ್ದಕ್ಕೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಗುಂಡು ಹಾರಿಸಿ ಸಂಭ್ರಮಾಚರಣೆ ನಡೆಸಿದ್ದರು. ಆ ವೇಳೆ ರಿಕ್ಷಾದಲ್ಲಿ ಅಮ್ಮನೊಂದಿಗೆ ತೆರಳುತ್ತಿದ್ದ ಹರ್ಷ್ ಎಂಬ ಬಾಲಕನಿಗೆ ಗುಂಡು ತಾಗಿದೆ. ನೇರ ಎದೆಗೆ ಗುಂಡು ಹೊಕ್ಕಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಬಾಲಕನನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಬಾಲಕನ ಮೃತದೇಹವನ್ನು ರಸ್ತೆಯಲ್ಲಿಟ್ಟು ಆತನ ಸಂಬಂಧಿಕರು ಪ್ರತಿಭಟನೆಯನ್ನೂ ನಡೆಸಿದರು.
ಏತನ್ಮಧ್ಯೆ, ಕೋವಿ ಹಿಡಿದು ನೃತ್ಯ ಮಾಡುತ್ತಾ ಸಂಭ್ರಮಾಚರಣೆ ಮಾಡುತ್ತಿರುವ ಸಮಾಜವಾದಿ ಪಕ್ಷದ ಕಾರ್ಯಕರ್ತರ ವಿಡಿಯೋ ಕೂಡಾ ಬಿಡುಗಡೆಯಾಗಿದೆ. ಭಾನುವಾರ ಈ ಘಟನೆ ನಡೆದಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಿರುವ ಬಗ್ಗೆ ವರದಿಯಾಗಿಲ್ಲ.

