

ಮುಂಬೈ: ಅಮೆರಿಕದ ಅಜ್ಞಾತ ಸ್ಥಳದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಸಲಾಗುತ್ತಿದ್ದ 26/11ರ ಮುಂಬೈ ದಾಳಿ ಪ್ರಮುಖ ರುವಾರಿ ಡೇವಿಡ್ ಹೆಡ್ಲಿಯ ವಿಚಾರಣೆಯನ್ನು ತಾಂತ್ರಿಕ ದೋಷದಿಂದಾಗಿ ರದ್ದುಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
26/11ರ ಮುಂಬೈ ದಾಳಿ ಪ್ರಮುಖ ರುವಾರಿಯಾಗಿರುವ ಡೇವಿಡ್ ಹೆಡ್ಲಿಯನ್ನು ಮುಂಬೈ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ವರೆಗೂ ಎರಡು ದಿನಗಳ ಕಾಲ ವಿಚಾರಣೆ ನಡೆದಿದ್ದು, ಇಂದು ಮೂರನೇ ದಿನದ ವಿಚಾರಣೆ ನಡೆಯಬೇಕಿದ್ದು, ಆದರೆ, ವಿಡಿಯೋ ಕಾನ್ಫೆರೆನ್ಸ್ ನಡೆಸಲು ಅಮೆರಿಕದಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡುಬಂದಿರುವುದರಿಂದ ವಿಚಾರಣೆಯನ್ನು ರದ್ದು ಪಡಿಸುವಂತೆ ತಿಳಿಸಿದೆ ಎಂದು ತಿಳಿದುಬಂದಿದೆ.
ಅಮೆರಿಕದಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದ್ದು, ಆಡಿಯೋ ಲಿಂಕ್ ಗಳು ಸಾಧ್ಯವಾಗುತ್ತಿದ್ದು, ವಿಡಿಯೋ ಲಿಂಕ್ ಗಳು ಸಾಧ್ಯವಾಗುತ್ತಿಲ್ಲ. ಸಂಪರ್ಕಿಸಲು ಸಾಕಷ್ಟು ಬಾರಿ ಪ್ರಯತ್ನಿಸುತ್ತಿದ್ದೇವೆ. ಆದರೆ, ನಮ್ಮ ಪ್ರಯತ್ನ ವಿಫಲವಾಗುತ್ತಿದೆ. ನಮ್ಮ ಎಲ್ಲಾ ತಜ್ಞರು ಈ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ನ್ಯಾಯಾಧೀಶರು ನಾಳೆ ವಿಚಾರಣೆ ನಡೆಸುವಂತೆ ತಿಳಿಸಿದ್ದಾರೆ. ಅಮೆರಿಕ ಮುಂದೆ ನಡೆಯುವ ವಿಚಾರಣೆಗೆ ಸಾಕಷ್ಟು ಸಮಯಾವಕಾಶವನ್ನು ನೀಡಲಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಉಜ್ವಲ್ ನಿಕಮ್ ಅವರು ತಿಳಿಸಿದ್ದಾರೆ.
ಉಗ್ರ ಹೆಡ್ಲಿಯನ್ನು ನಾಳೆ ಮತ್ತೆ ವಿಚಾರಣೆಗೊಳಪಡಿಸಲಾಗುತ್ತಿದ್ದು, ವಿಚಾರಣೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ. ಎರಡು ದಿನಗಳಿಂದ ನಡೆದ ವಿಚಾರಣೆಯಲ್ಲಿ ಹೆಡ್ಲಿ ಸಾಕಷ್ಟು ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದ್ದು, ಇಸಿಸ್ ಜೊತೆಗೆ ಕಾರ್ಯನಿರ್ವಹಿಸುತ್ತಿರುವುದು ಹಾಗೂ ಭಾರತದ ಮೇಲೆ ದಾಳಿ ನಡೆಸುವ ಹಲವು ಸಂಚುಗಳ ಕುರಿತಂತೆ ಮಾಹಿತಿ ನೀಡಿದ್ದಾನೆ. ಅಲ್ಲದೆ, ತನ್ನ ಹಿಂದೆ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಇರುವುದನ್ನು ಬಹಿರಂಗ ಪಡಿಸಿದ್ದಾನೆ.
Advertisement