
ಸಿಯಾಚಿನ್ ನ ಭೀಕರ ಹಿಮಪಾತದಲ್ಲಿ ಸಿಲುಕಿ 6 ದಿನಗಳ ನಂತರ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದ ಯೋಧ ಹನುಮಂತಪ್ಪ ಕೊಪ್ಪದ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಹುತಾತ್ಮರಾಗಿದ್ದು, ಅವರ ಸಾವಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ದೇಶದ ವೀರಪುತ್ರ ಯೋಧ ಹನುಮಂತಪ್ಪ ಕೊಪ್ಪದ್ ಸಾವಿನಿಂದ ತುಂಬಾನೆ ದುಃಖವಾಗಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿದ್ದ ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನಿಮ್ಮೊಳಗಿನ ಯೋಧ ಸದಾ ಜೀವಂತ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಹನುಮಂತಪ್ಪ ಕೊಪ್ಪದ್ ಸಾವು ಇದು ನಿಜಕ್ಕೂ ದುಃಖಕರವಾದ ದಿನ. ಯೋಧ ಬದುಕಿದ್ದರೆ ಅದೊಂದು ದೊಡ್ಡ ಪವಾಡವಾಗ್ತಿತ್ತು. ಯೋಧನ ಕುಟುಂಬದ ಸಮಸ್ಯೆಗೆ ಸಿಎಂ ಸ್ಪಂಧಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೋವನ್ನು ವ್ಯಕ್ತಪಡಿಸಿದ್ದಾರೆ.
ಯೋಧ ಹನುಮಂತಪ್ಪ ಕೊಪ್ಪದ್ ಸಾವು ನಿಜಕ್ಕೂ ಹೃದಯವಿದ್ರಾವಕ ಸುದ್ದಿ. ನಿಮ್ಮ ತ್ಯಾಗಕ್ಕೆ ಧನ್ಯವಾದಗಳು. ಎಂದೆಂದಿಗೂ ನಿಮ್ಮ ನಮ್ಮ ಹಿರೋ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.
ಕೊಪ್ಪದ್ ಸಾವಿನಿಂದ ತೀವ್ರ ದುಃಖವಾಗಿದೆ. ಕೊಪ್ಪದ್ ಅವರದ್ದು ಕೆಚ್ಚೆದೆಯ ಹೃದಯ. ಕಠಿಣ ಪ್ರದೇಶವಾದ ಸಿಯಾಚಿನ್ ನಲ್ಲಿ ಅವರು ದುಡಿದಿದ್ದಾರೆ ಎಂದು ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.
Advertisement