

ಚೆನ್ನೈ: ಶ್ರೀಲಂಕಾದಿಂದ ಬಂಧನಕ್ಕೊಳಗಾಗಿರುವ 29 ಮೀನುಗಾರರನ್ನು ಬಿಡುಗಡೆ ಮಾಡಲು ಆಗ್ರಹಿಸಿ ಚೆನ್ನೈ ನಲ್ಲಿರುವ ಶ್ರೀಲಂಕಾ ಉಪ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಲು ತಮಿಳುನಾಡು ಮೀನುಗಾರರು ನಿರ್ಧರಿಸಿದ್ದಾರೆ.
ತಮಿಳುನಾಡಿನ 8 ಕರಾವಳಿ ಜಿಲ್ಲೆಯ ಮೀನುಗಾರರು ಶ್ರೀಲಂಕಾ ತಮಿಳುನಾಡಿನ ಮೀನುಗಾರರನ್ನು ಬಂಧಿಸಿರುವ ಬಗ್ಗೆ ಸಭೆ ನಡೆಸಿದ್ದು, ಮೀನುಗಾರರ ಬಿಡುಗಡೆಗಾಗಿ ಆಗ್ರಹಿಸಿ ಶ್ರೀಲಂಕಾ ಉಪ ರಾಯಭಾರ ಕಚೇರಿಗೆ ಫೆ.29 ರಂದು ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ಮೀನುಗಾರರ ಬಿಡುಗಡೆ ಜೊತೆಗೆ ವಶಪಡಿಸಿಕೊಳ್ಳಲಾಗಿರುವ 78 ದೋಣಿಗಳನ್ನು ವಾಪಸ್ ನೀಡಬೇಕೆಂದು ತಮಿಳುನಾಡಿನ ಮೀನುಗಾರರ ಪಂಚಾಯತ್ ಆಗ್ರಹಿಸಿದೆ. ಈ ಬಗ್ಗೆ ಮಾತನಾಡಿರುವ ತಮಿಳುನಾಡು ಮೀನುಗಾರರ ಪಂಚಾಯತ್ ನ ಅಧ್ಯಕ್ಷ ರಾಜೇಂದ್ರನ್, ಶ್ರೀಲಂಕಾ 5 ರಿಂದ 30 ಲಕ್ಷದ ವರೆಗಿನ ಮೌಲ್ಯದ ದೋಣಿಗಳನ್ನು ವಶಪಡಿಸಿಕೊಂಡಿದೆ. ಮೀನುಗಾರರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಜ.26 ವರೆಗೆ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆದರೆ ಈ ವರೆಗೂ ನಡೆದ ಪ್ರತಿಭಟನೆಗಳು ಫಲಪ್ರದವಾಗದ ಕಾರಣ ಚೆನ್ನೈ ನಲ್ಲಿರುವ ಶ್ರೀಲಂಕಾ ಉಪ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.