ಸಂಸತ್ತಿನಲ್ಲಿ ಸಚಿವೆ ಸ್ಮೃತಿ ಇರಾನಿಯಿಂದ ಸುಳ್ಳು: ರೋಹಿತ್ ತಾಯಿ ಸುದ್ದಿಗೋಷ್ಠಿ

ರೋಹಿತ್ ವೆಮುಲಾ ಆತ್ಮಹತ್ಯೆ ವಿಚಾರ ಸಂಸತ್ತಿನಲ್ಲಿ ಮಾರ್ಧನಿಸುತ್ತಿದ್ದಂತೆಯೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೇಳಿಕೆ ಸುಳ್ಳು ಎಂದು ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೆಮುಲಾ ಕುಟುಂಬಸ್ಥರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೋಹಿತ್ ವೆಮುಲಾ ತಾಯಿ ರಾಧಿಕಾ
ಸುದ್ದಿಗೋಷ್ಠಿಯಲ್ಲಿ ರೋಹಿತ್ ವೆಮುಲಾ ತಾಯಿ ರಾಧಿಕಾ
Updated on

ಹೈದರಾಬಾದ್: ರೋಹಿತ್ ವೆಮುಲಾ ಆತ್ಮಹತ್ಯೆ ವಿಚಾರ ಸಂಸತ್ತಿನಲ್ಲಿ ಮಾರ್ಧನಿಸುತ್ತಿದ್ದಂತೆಯೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೇಳಿಕೆ ಸುಳ್ಳು ಎಂದು ಆತ್ಮಹತ್ಯೆ ಮಾಡಿಕೊಂಡ  ರೋಹಿತ್ ವೆಮುಲಾ ಕುಟುಂಬಸ್ಥರು ಹೇಳಿದ್ದಾರೆ.

ಹೈದರಾಬಾದಿನಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೋಹಿತ್ ವೆಮುಲಾ ಅವರ ತಾಯಿ ರಾಧಿಕಾ ಅವರು, ಸಂಸತ್ತಿನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಹೇಳಿದ  ಸುಳ್ಳುಗಳನ್ನು ಬಹಿರಂಗ ಪಡಿಸಲು ನಾನು ಈ ಸುದ್ದಿಗೋಷ್ಠಿಗೆ ಬಂದಿದ್ದೇನೆ. ರೋಹಿತ್ ಆತ್ಮಹತ್ಯೆ ಮಾಡಿಕೊಂಡ ದಿನ ಪೊಲೀಸರನ್ನು ಮತ್ತು ವೈದ್ಯರು ಸೇರಿದಂತೆ ಯಾರನ್ನೂ ವಿವಿ ಒಳಗೆ  ಬಿಟ್ಟಿರಲ್ಲಿಲ್ಲ. ಒಂದು ವೇಳೆ ರೋಹಿತ್ ಅಲ್ಪ ಪ್ರಾಣದಲ್ಲಿದ್ದರೆ ಆತನನ್ನು ಬದುಕಿಸಬಹುದಿತ್ತು. ಆದರೆ ಅದಕ್ಕೂ ಅವಕಾಶ ನೀಡಲಿಲ್ಲ. ರೋಹಿತ್ ವೆಮುಲಾ ಸೇರಿದಂತೆ ಮೂವರು ವಿದ್ಯಾರ್ಥಿಗಳನ್ನು  ವಿವಿಯಿಂದ ಅಮಾನತು ಮಾಡಲಾಗಿತ್ತು. ಅಮಾನತು ಮತ್ತು ರೋಹಿತ್ ಆತ್ಮಹತ್ಯೆ ಬಿಜೆಪಿ ಪಕ್ಷಕ್ಕೆ ತೊಡಕಾಗುವುದರಿಂದ ಇಡೀ ಪ್ರಕರಣವನ್ನು ತಿರುಚುವ ಯತ್ನ ನಡೆದಿದೆ ಎಂದು ಹೇಳಿದರು.

ಇದೇ ವೇಳೆ ಸುದ್ದಿಗೋಷ್ಠಿಯಲ್ಲಿದ್ದ ಮತ್ತೋರ್ವ ವಿದ್ಯಾರ್ಥಿ ಮತ್ತು ರೋಹಿತ್ ವೆಮುಲಾ ಸ್ನೇಹಿತ ಮಾತನಾಡಿ, ಕ್ಷುಲ್ಲಕ ಕಾರಣಕ್ಕೆ ವಿವಿಯಿಂದ ಅಮಾನತು ಮಾಡಿದ ಕಾರಣಕ್ಕೆ ರೋಹಿತ್  ಆತ್ಮಹತ್ಯೆ ಮಾಡಿಕೊಂಡ. ಆದರೆ ಕೇಂದ್ರ ಸರ್ಕಾರ ಪ್ರಕರಣವನ್ನು ತಿರುಚುವ ಸಲುವಾಗಿ ಆತ ದಲಿತನಲ್ಲ ಎಂದು ಸುಳ್ಳು ಹೇಳುತ್ತಿದೆ. ರೋಹಿತ್ ವೆಮುಲಾ ಅವರ ತಾಯಿ ಪರಿಶಿಷ್ಟ ಜಾತಿಗೆ  ಸೇರಿದವರಾಗಿದ್ದಾರೆ. ರಾಧಿಕಾ ಅವರ ಅಜ್ಜಿ ಇವರನ್ನು ದತ್ತು ತೆಗೆದುಕೊಂಡಿದ್ದರು. ರೋಹಿತ್ ವೆಮುಲಾ ಜಾತಿ ಪ್ರಮಾಣ ಪತ್ರದಲ್ಲಿಯೂ ಕೂಡ ಆತ ದಲಿತನೆಂದು ನಮೂದಾಗಿದೆ. ಪ್ರಕರಣವನ್ನು ತಿರುಚುವ ಒಂದೇ ಉದ್ದೇಶದಿಂದ ಸ್ಮೃತಿ ಇರಾನಿ ಅವರು ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.

ನಿನ್ನೆ ನಡೆದ ಸಂಸತ್ ಕಲಾಪದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೆಮುಲಾ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಪ್ರತಿಪಕ್ಷಗಳಿಗೆ ಖಡಕ್ ಉತ್ತರ ನೀಡಿದ್ದ  ಸಚಿವೆ ಸ್ಮೃತಿ ಇರಾನಿ ಅವರು ರೋಹಿತ್ ವೆಮುಲಾ ದಲಿತನಲ್ಲ ಎಂದು ಹೇಳಿದ್ದರು. ಇದೀಗ ಸ್ವತಃ ರೋಹಿತ್ ತಾಯಿ ಇದನ್ನು ಸುಳ್ಳು ಎಂದು ಹೇಳುತ್ತಿದ್ದು, ಮತ್ತೆ ಪ್ರಕರಣಕ್ಕೆ  ತಿರುವುದೊರೆತಂತಾಗಿದೆ ಮತ್ತು ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com