

ರಾಜಸ್ಥಾನ: ಎರಡು ವರ್ಷದಿಂದ 12 ವರ್ಷದ 4 ಕಂದಮ್ಮಗಳಿಗೆ ಮದುವೆ ಮಾಡಿರುವ ಘಟನೆ ರಾಜಸ್ತಾನದಲ್ಲಿ ನಡೆದಿದೆ.
ಬಾಲ್ಯ ವಿವಾಹ ಮಾಡಿದ್ದಾಗಿ ಮನೆಯವರೇ ಒಪ್ಪಿಕೊಂಡಿದ್ದಾರೆ. ಫೆ.23ರಂದು ಭಿಲ್ವಾರ ಜಿಲ್ಲೆಯ ಗಜುನಾ ಎಂಬ ಹಳ್ಳಿಯ ಮದನ್‌ನಾಥ್ ಎಂಬುವವರ ಮನೆಯಲ್ಲಿ ಈ ಮದುವೆಗಳು ನಡೆದಿವೆ. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರನ್ನು ಕಳುಹಿಸಿದ್ದಾಗಿ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಮೋಹನ್ ಶರ್ಮ ಹೇಳಿದ್ದಾರೆ. ಇವರನ್ನು ವಿವಾಹವಾಗುವವರು ಕೂಡ ಅಪ್ರಾಪ್ತ ಬಾಲಕರು ಎಂದು ತಿಳಿದು ಬಂದಿದೆ.
ಇದನ್ನು ಮೊದಲು ಪತ್ತೆ ಹಚ್ಚಿದ ಬಾಲ್ಯ ವಿವಾಹದ ವಿರುದ್ಧ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ಕೃತಿ ಭಾರತಿ ರಾಜಸ್ಥಾನ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೆ ತಂದಿದ್ದಾರೆ. ನಂತರ ಭಿಲ್ವಾರ ಚೈಲ್ಡ್ ವೆಲ್‌ಫೇರ್ ಕಮಿಟಿಗೆ ವಿಷಯ ತಿಳಿದು ಅವರು ಎಸ್‌ಪಿ ಪ್ರದೀಪ್‌ಮೋಹನ್ ಶರ್ಮ ಅವರಿಗೆ ದೂರು ನೀಡಿದ್ದಾರೆ.
ಫೆ.23ರಂದು ತನ್ನ ಅತ್ತಿಗೆ ಹಾಗೂ ಸಹೋದರರು ಸೇರಿ ಗೌಪ್ಯವಾಗಿ ಈ ಮದುವೆಗಳನ್ನು ನಡೆಸಿದ್ದಾಗಿ ಬಾಲಕಿಯರ ಚಿಕ್ಕಪ್ಪ ಕುಪರಾವಲ್ ಪೊಲೀಸರಿಗೆ ತಿಳಿಸಿದ್ದಾರೆ. ಪೋಷಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
Advertisement