ಖಮ್ಮಂ: ಪೊಲೀಸರೊಂದಿಗೆ ನಡೆದ ಗುಂಡಿನ ಘರ್ಷಣೆಯಲ್ಲಿ 8 ಮಂದಿ ಮಾವೋವಾದಿಗಳು ಸಾವಿಗೀಡಾಗಿರುವ ಘಟನೆ ಛತ್ತೀಸ್ ಗಢ-ತೆಲಂಗಾಣ ಗಡಿಯಲ್ಲಿ ಮಂಗಳವಾರ ನಡೆದಿದೆ.
ಮೂಲಗಳ ಪ್ರಕಾರ ತೆಲಂಗಾಣ-ಛತ್ತೀಸ್ ಗಢ ಗಡಿಯಲ್ಲಿರುವ ಬಿಜಾಪೂರ್ ಜಿಲ್ಲೆಯ ಬಟೇಟಂಗ್ ಗ್ರಾಮದ ಬಳಿಯಲ್ಲಿ ಈ ಎನ್ ಕೌಂಟರ್ ನಡೆದಿದ್ದು, 8 ಮಂದಿ ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗ್ರಾಮದ ಸಮೀಪವಿರುಣ ಅರಣ್ಯದಲ್ಲಿ ನಕ್ಸಲರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ತೆಲಂಗಾಣ ಪೊಲೀಸರು ಛತ್ತೀಸ್ ಗಢ ಪೊಲೀಸರ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಪೊಲೀಸರ ಬರುವಿಕೆಯನ್ನು ಮನಗಂಡ ಮಾವೋವಾದಿಗಳು ಏಕಾಏಕಿ ಪೊಲೀಸರತ್ತ ಮನಸೋ ಇಚ್ಛೆ ಗುಂಡಿನ ಸುರಿಮಳೆಗರೆದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದಾಗ 8 ಮಂದಿ ಮಾವೋವಾದಿಗಳು ಹತರಾದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಪ್ರದೇಶದಲ್ಲಿ 9 ಶಸ್ತ್ರಾಸ್ತಗಳು ಮತ್ತು ಬುಲೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಎನ್ ಎಲ್ ಆರ್ ರೈಫಲ್, ಎಕೆ47 ಬಂದೂಕು ಮತ್ತು ಕೆಲ ಸ್ವದೇಶಿ ಬಾಂಬ್ ಗಳು ಸೇರಿವೆ ಎಂದು ತಿಳಿದುಬಂದಿದೆ.
ಮೃತರ ಪೈಕಿ ಇಬ್ಬರನ್ನು ಗುರುತಿಸಲಾಗಿದ್ದು, ಎಲ್ ಒಎನ್ ಕಮಾಂಡರ್ ಲಚ್ಚನ್ನ ಮತ್ತು ಮಾವೋವಾದಿ ಸಂಘಟನೆಯ ತೆಲಂಗಾಣ ಕಾರ್ಯದರ್ಶಿ ಹರಿಭೂಷಣ್ ಎಂದು ತಿಳಿದುಬಂದಿದೆ. ಉಳಿದ ಐವರು ಮಹಿಳಾ ಮಾವೋವಾದಿಗಳಾಗಿದ್ದು, ಅವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಇನ್ನು ಪೊಲೀಸ್ ಎನ್ ಕೌಂಟರ್ ನಿಂದಾಗಿ ಘಟನಾ ಪ್ರದೇಶದ ಸುತ್ತಮುತ್ತ ಭಯಭೀತ ವಾತಾವರಣ ನಿರ್ಮಾಣಗೊಂಡಿದ್ದು, ಭದ್ರತಾ ಪಡೆಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.
Advertisement