
ಬೆಂಗಳೂರು: ಇಲಾಖೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 1600 ಹುದ್ದೆಗಳನ್ನು ಸದ್ಯದಲ್ಲೇ ಭರ್ತಿ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 504 ಶಾಲೆ, ಹಾಸ್ಟೆಲ್‍ಗಳಿವೆ. ಅವುಗಳಲ್ಲಿ 1600 ಹುದ್ದೆಗಳು ಖಾಲಿಯಾಗಿದ್ದು, ಈ ವರ್ಷದಲ್ಲೇ ಅವುಗಳ ಭರ್ತಿಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಈ ಹುದ್ದೆಗಳನ್ನು ಕೆಪಿಎಸ್ಸಿಮೂಲಕ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಎಲ್ಲಾ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಮೇ ಒಳಗಾಗಿ ಪೂರ್ಣಗೊಳಿಸುವಂತೆ ಆಯೋಗಕ್ಕೆ ಸೂಚಿಸಲಾಗುತ್ತದೆ. ಒಂದೊಮ್ಮೆ ಆ ಸಮಯದಲ್ಲಿ ನೇಮಕ ಸಾಧ್ಯವಾಗದಿದ್ದರೆ, ಇಲಾಖೆಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಹುದ್ದೆಗಳನ್ನು ತುಂಬಲಿದೆ ಎಂದು ಅವರು ವಿವರಿಸಿದರು.
ನಾಳೆಯೇ ಆದೇಶ:
ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 409 ಶಿಕ್ಷಕರನ್ನು ಕಾಯಂ ಮಾಡಲಾಗುತ್ತಿದ್ದು, ಅವರಿಗೆ ಮಂಗಳವಾರವೇ ಆದೇಶ ರವಾನೆಯಾಗಲಿದೆ ಎಂದು ಸಚಿವರು ಹೇಳಿದರು. ಕಳೆದ 2011ಕ್ಕೂ ಮುನ್ನ ಸೇರಿದ ಅನೇಕ ಶಿಕ್ಷಕರು ಗುತ್ತಿಗೆ ಆಧಾರ ಮೇಲೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಅವರನ್ನು ಕಾಯಂ ಮಾಡಿಕೊಳ್ಳಲು ಅವಕಾಶ ಇರಲಿಲ್ಲ. ಆದರೆ ಅವರು ಕೋರ್ಟ್ ಮೊರೆ ಹೋಗಿದ್ದರಿಂದ ಕೋರ್ಟ್ ಅವರಿಗೆ ಅನುಕಂಪ ಆಧಾರಹದಲ್ಲಿ ನೇಮಕ ಮಾಡಿಕೊಳ್ಳುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇಲಾಖೆ 409 ಮಂದಿಗೆ ಸೇವೆ ಕಾಯಂ ಮಾಡಿರುವ ಆದೇಶ ರವಾನಿಸಲಾಗುತ್ತಿದೆ ಎಂದರು.
Advertisement