ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ಎತ್ತಿನ ಗಾಡಿ, ಜಲ್ಲಿಕಟ್ಟು ಆಚರಣೆಗೆ ಹೇರಿದ್ದ ನಿಷೇಧ ತೆರವು

ಕರ್ನಾಟಕ ಸೇರಿದಂತೆ ಇತರ ಆರು ರಾಜ್ಯಗಳಲ್ಲಿ ಜಲ್ಲಿಕಟ್ಟು ಮತ್ತು ಎತ್ತಿನ ಗಾಡಿ ಸ್ಪರ್ಧೆಗೆ ಹೇರಿರುವ ನಿಷೇಧವನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಕರ್ನಾಟಕ ಮತ್ತು ಇತರ ಆರು ರಾಜ್ಯಗಳಲ್ಲಿ ಜಲ್ಲಿಕಟ್ಟು ಮತ್ತು ಎತ್ತಿನ ಗಾಡಿ ಸ್ಪರ್ಧೆಗೆ ಹೇರಿರುವ ನಿಷೇಧವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ. ಕೇಂದ್ರ ಪರಿಸರ ಸಚಿವಾಲಯ ಈ ಸಂಬಂಧ ನಿನ್ನೆ ಅಧಿಸೂಚನೆ ಹೊರಡಿಸಿದ್ದು, ಪಂದ್ಯಗಳನ್ನು ಆಯೋಜಿಸುವ ಮುನ್ನ ಸಂಬಂಧಪಟ್ಟ ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆದುಕೊಂಡಿರಬೇಕು ಎಂದು ಹೇಳಿದೆ.

ಜಲ್ಲಿಕಟ್ಟು ಅಥವಾ ಎತ್ತಿನ ಗಾಡಿ ಪಂದ್ಯಗಳನ್ನು ಆಯೋಜಿಸಬೇಕಾದರೆ ಪ್ರಾಣಿಗಳಿಗೆ  ಹಿಂಸೆ ತಡೆಗಟ್ಟುವ ಜಿಲ್ಲಾ ಸೊಸೈಟಿಯಿಂದ ಮತ್ತು ರಾಜ್ಯ ಪ್ರಾಣಿ ಅಭಿವೃದ್ಧಿ ಮಂಡಳಿಯಿಂದ ಅಥವಾ ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆದಿರಬೇಕು. ಪ್ರಾಣಿಗಳಿಗೆ ಪಂದ್ಯ ಸಂದರ್ಭದಲ್ಲಿ ಅಥವಾ ಪಂದ್ಯಕ್ಕೆ ಸಿದ್ಧತೆಗೊಳ್ಳುವ ಸಂದರ್ಭದಲ್ಲಿ ಅನಗತ್ಯ ದೈಹಿಕ ನೋವು ಕೊಡಬಾರದು ಎಂದು ಪರಿಸರ ಸಚಿವಾಲಯದ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಎತ್ತುಗಳನ್ನು ಜಲ್ಲಿಕಟ್ಟು ಅಥವಾ ಎತ್ತಿನ ಗಾಡಿ ಸ್ಪರ್ಧೆಗೆ ಬಳಸಿಕೊಳ್ಳುವ ಸಂಪ್ರದಾಯ, ಆಚರಣೆಗಳು ನಮ್ಮ ದೇಶದ ಕೆಲವು ರಾಜ್ಯಗಳಲ್ಲಿರಬಹುದು. ಯಾವುದೋ ಸಮುದಾಯಗಳಲ್ಲಿ ಇದು ಪದ್ಧತಿಯಾಗಿರಬಹುದು. ಅಂತಹ ಸಂದರ್ಭಗಳಲ್ಲಿ ಬಳಸಿಕೊಳ್ಳಲಿ. ಆದರೆ ಎತ್ತುಗಳನ್ನು ಬಳಸಿಕೊಳ್ಳುವಾಗ ಈ ನಿಯಮಗಳನ್ನು ಜನರು ಪಾಲಿಸಬೇಕು.

1.  ವಾರ್ಷಿಕವಾಗಿ ಎತ್ತಿನ ಗಾಡಿ ಸ್ಪರ್ಧೆ ಹಾಗೂ ಜಲ್ಲಿಕಟ್ಟು ಆಯೋಜಿಸುವ ಜಿಲ್ಲೆಗಳು ಆಯಾ ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು.
2. ಎತ್ತಿನ ಗಾಡಿ ಸ್ಪರ್ಧೆಯನ್ನು  ಸರಿಯಾದ ಟ್ರ್ಯಾಕ್ ನಲ್ಲಿ ಸಂಘಟಿಸಬೇಕು. ಎರಡು ಕಿಲೋ ಮೀಟರ್ ಗಿಂತ ಹೆಚ್ಚು ದೂರದವರೆಗೆ ಎತ್ತುಗಳನ್ನು ಓಡಿಸಬಾರದು. ಜಲ್ಲಿಕಟ್ಟಿನಲ್ಲಿ ಎತ್ತು ಆವರಣ ಬಿಟ್ಟು ಹೋಗುವ ಸ್ಥಳದಿಂದ 15 ಮೀಟರ್ ಅಂತರದಲ್ಲಿ ಪಳಗಿಸಬೇಕು.
3. ಎತ್ತನ್ನು ಪಂದ್ಯಕ್ಕೆ ಬಳಸಿಕೊಳ್ಳುವ ಮುನ್ನ ಅದು ದೈಹಿಕವಾಗಿ ಸಮರ್ಥವಾಗಿದೆಯೇ ಎಂದು ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯಿಂದ ಪರೀಕ್ಷೆಗೆ ಒಳಪಟ್ಟಿರಬೇಕು. ಪಂದ್ಯದಲ್ಲಿ ಪ್ರದರ್ಶನ ಸಾಮರ್ಥ್ಯವನ್ನು ಹೆಚ್ಚಿಸುವ ಯಾವುದೇ ಡ್ರಗ್ಸ್ ಗಳನ್ನು ಎತ್ತಿಗೆ ನೀಡಬಾರದು.
4. ಪಂದ್ಯದ ಆಯೋಜಕರು ಮತ್ತು ಜಿಲ್ಲಾಡಳಿತ ಪ್ರಾಣಿಗಳಿಗೆ ಹಿಂಸಾಚಾರ ತಡೆಗಟ್ಟುವ ಕಾಯ್ದೆ 1960 ಮತ್ತು ಸುಪ್ರೀಂ ಕೋರ್ಟ್ ಮೇ 1, 2014ರಂದು ಘೋಷಿಸಿದ ಐದು ಸ್ವಾತಂತ್ರ್ಯಗಳನ್ನು ಸರಿಯಾಗಿ ಪಾಲಿಸಬೇಕು ಎಂದು ಪರಿಸರ ಸಚಿವಾಲಯದ ಅಧಿಸೂಚನೆ ಹೇಳಿದೆ.

ಈ ಬಗ್ಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಳಿಸೈ ಸೌಂದರರಾಜನ್ ಅಭಿಪ್ರಾಯ ವ್ಯಕ್ತಪಡಿಸಿ, ಇದರಲ್ಲಿ ರಾಜಕೀಯ ಏನೂ ಇಲ್ಲ, ಪ್ರಾಣಿ ಪ್ರಿಯರು ಜಲ್ಲಿಕಟ್ಟು ಆಚರಣೆಯ ಹಿಂದೆ ಇರುವ ಸಂಪ್ರದಾಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೆಲವರು ದೂರು ಸಲ್ಲಿಸುತ್ತಾರೆ ಎಂದರು.

ಕೇಂದ್ರದ ಅಧಿಸೂಚನೆಯನ್ನು ಸ್ವಾಗತಿಸಿರುವ ಕೇಂದ್ರ ಸಚಿವ ಪೋನ್ ರಾಧಾಕೃಷ್ಣನ್, ಎಲ್ಲಾ ರಾಜಕೀಯ ನಾಯಕರ ಪರಿಶ್ರಮದಿಂದಾಗಿ ಜಲ್ಲಿಕಟ್ಟು ನಡೆಸಲು ಮತ್ತೆ ಅನುಮತಿ ಸಿಕ್ಕಿದೆ. ಈ ಸಂಪ್ರದಾಯಬದ್ಧ ಆಚರಣೆಗೆ ಅವಕಾಶ ಮಾಡಿಕೊಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವದೇಕರ್ ಅವರಿಗೆ ಅಭಿನಂದನೆಗಳು. ಈ ಬಾರಿಯ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜಲ್ಲಿಕಟ್ಟು ನಡೆಸಲು ತಮಿಳುನಾಡಿನ ಯುವಕರು ಸಿದ್ಧತೆ ಮಾಡಿಕೊಳ್ಳಲಿ ಎಂದರು.

ಜಲ್ಲಿಕಟ್ಟು ತಮಿಳುನಾಡಿನ ಪ್ರಮುಖ ಆಚರಣೆಯಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಹರ್ಯಾಣ, ಕೇರಳ ಮತ್ತು ಗುಜರಾತ್ ರಾಜ್ಯಗಳಲ್ಲಿ ಎತ್ತಿನ ಗಾಡಿ ಓಟದ ಆಚರಣೆ ಸಂಪ್ರದಾಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com