'ಶನಿಶಿಂಗಣಾಪುರ ಟ್ರಸ್ಟ್'ಗೆ ಮಹಿಳಾ ಸಾರಥ್ಯ

ಗರ್ಭಗುಡಿ ವ್ಯಾಪ್ತಿಯೊಳಗೆ ಮಹಿಳೆಯೊಬ್ಬರು ಪ್ರವೇಶಿಸಿದ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಶಿರಡಿ ಸಮೀಪದ ಶನಿಶಿಂಗಣಾಪುರ ದೇವಸ್ಥಾನದ ಟ್ರಸ್ಟ್, ಮಹಿಳೆಯೊಬ್ಬರಿಗೆ ತನ್ನ ಆಡಳಿತದ ಚುಕ್ಕಾಣಿ ನೀಡುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ...
'ಶನಿಶಿಂಗಣಾಪುರ ಟ್ರಸ್ಟ್'ಗೆ ಮಹಿಳಾ ಸಾರಥ್ಯ
'ಶನಿಶಿಂಗಣಾಪುರ ಟ್ರಸ್ಟ್'ಗೆ ಮಹಿಳಾ ಸಾರಥ್ಯ

ಅಹಮದ್‍ನಗರ: ಗರ್ಭಗುಡಿ ವ್ಯಾಪ್ತಿಯೊಳಗೆ ಮಹಿಳೆಯೊಬ್ಬರು ಪ್ರವೇಶಿಸಿದ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಶಿರಡಿ ಸಮೀಪದ ಶನಿಶಿಂಗಣಾಪುರ ದೇವಸ್ಥಾನದ ಟ್ರಸ್ಟ್, ಮಹಿಳೆಯೊಬ್ಬರಿಗೆ ತನ್ನ ಆಡಳಿತದ ಚುಕ್ಕಾಣಿ ನೀಡುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ.

ಪುರುಷರೇ ದೇವಾಲಯದ ಆಡಳಿತ ನಿರ್ವಹಣೆ ಮಾಡುವ ತನ್ನ ಗತ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿರುವ ಟ್ರಸ್ಟ್, ಜ.7ರಂದು ಅನಿತಾ ಶಿತೆ ಎಂಬುವರನ್ನು ಟ್ರಸ್ಟ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಘೋಷಿಸಿದೆ. ಅನಿತಾ ಶಿತೆ ಅವರನ್ನು ಕಳೆದ ವಾರವಷ್ಟೇ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಮಾಡಲಾಗಿತ್ತು.

ಇದೇ ವೇಳೆ 11 ಸದಸ್ಯರ ಆಡಳಿತ ಮಂಡಳಿಗೆ ಶಾಲಿನಿ ಲಾಂಡೆ ಎಂಬ ಮತ್ತೊಬ್ಬ ಮಹಿಳೆಗೂ ಅವಕಾಶ ನೀಡಲಾಗಿದೆ. ಆದರೆ, ಟ್ರಸ್ಟ್ ನೂತನ ಅಧ್ಯಕ್ಷೆ ಅನಿತಾ ಶಿತೆ ಕೂಡ, ಮಹಿಳೆಯರಿಗೆ ಗರ್ಭಗುಡಿ ಪ್ರವೇಶ ನಿರ್ಬಂಧ ಸೇರಿದಂತೆ ದೇವಾಲಯದ ಎಲ್ಲಾ ಸಂಪ್ರದಾಯಗಳ ಬಗ್ಗೆ ತಮಗೆ ಅತ್ಯಂತ ನಂಬಿಕೆ ಹಾಗೂ ಗೌರವವಿದ್ದು, ಹಿಂದಿನ ಎಲ್ಲ ರೀತಿರಿವಾಜುಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ. ಹಾಗಾಗಿ ಮಹಿಳೆಯೊಬ್ಬರು ಟ್ರಸ್ಟ್ ಹೊಣೆ ಹೊತ್ತುಕೊಂಡಿರುವುದರಿಂದಾಗಿ ದೇವಾಲಯದ ಮಹಿಳಾ ಸಮಾನತೆ ವಿರುದ್ಧದ ಆಚರಣೆಗಳಲ್ಲಿ ಬದಲಾವಣೆ ನಿರೀಕ್ಷಿಸಲಾಗದು ಎನ್ನಲಾಗಿದೆ.

ಕಳೆದ ನವೆಂಬರ್‍ನಲ್ಲಿ ಮಹಿಳೆಯೊಬ್ಬರು ದೇವಾಲಯದ ಗರ್ಭಗುಡಿ ಪ್ರವೇಶಿಸಿ ದೇವರ ಪೂಜೆಗೆ ಯತ್ನಿಸಿದ್ದರು. ಮಹಿಳೆ ಪ್ರವೇಶಿಸಿದ್ದರಿಂದ ದೇವಾಲಯ ಅಪವಿತ್ರವಾಗಿದೆ
ಎಂದು ಟ್ರಸ್ಟ್ ಶುದ್ಧೀಕರಣ ನಡೆಸಿತ್ತು. ಈ ವಿಷಯ ದೇಶಾದ್ಯಂತ ಮಹಿಳಾ ಸಮಾನತೆ ಮತ್ತು ಧಾರ್ಮಿಕ ಮೌಢ್ಯದ ಬಗೆಗಿನ ವ್ಯಾಪಕ ಚರ್ಚೆ, ಹೋರಾಟಗಳಿಗೂ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com