
ನವದೆಹಲಿ: ವಿಷಕಾರಿ ಅಂಶ ಪತ್ತೆಯಾಗಿ ನಿಷೇಧಕ್ಕೆ ಒಳಗಾಗಿದ್ದ ನೆಸ್ಲೆ ಸಂಸ್ಥೆ ಮ್ಯಾಗಿ ನೂಡಲ್ಸ್ ಮೇಲಿನ ನಿಷೇಧ ತೆರವಿನ ಬಳಿಕ ನೂತನವಾಗಿ ಮಾರುಕಟ್ಟೆಗೆ ಬಂದಿರುವ ಮ್ಯಾಗಿ ನ್ಯೂಡಲ್ಸ್'ನ ಮರುಪರೀಕ್ಷೆ ವರದಿಯನ್ನು 8 ವಾರದೊಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕರ್ನಾಟಕದ ಮೈಸೂರು ಲ್ಯಾಬೋರೇಟರಿಗೆ ಬುಧವಾರ ಸೂಚನೆ ನೀಡಿದೆ.
ಈ ಹಿಂದೆ ನೆಸ್ಲೆ ಸಂಸ್ಥೆಯ ಖ್ಯಾತ ತಿನಿಸು ಮ್ಯಾಗಿ ನ್ಯೂಡಲ್ಸ್ ನಲ್ಲಿ ಸೀಸ ಮತ್ತು ಗ್ಲುಟಮೇಟ್ ಅಂಶ ಹೆಚ್ಚಿದೆ ಎಂಬ ಆರೋಪದಡಿಯಲ್ಲಿ ದೇಶದ ವಿವಿಧ ರಾಜ್ಯ ಸರ್ಕಾರಗಳು ಅದಕ್ಕೆ ನಿಷೇಧ ಹೇರಿದ್ದವು. ಅಲ್ಲದೆ ಮ್ಯಾಗಿ ನ್ಯೂಡಲ್ಸ್ ನ 16 ಸ್ಯಾಂಪಲ್ಸ್ ಅನ್ನು ಪರೀಕ್ಷೆಗೊಳಪಡಿಸಬೇಕು ಎಂದು ಎನ್ ಸಿ ಡಿಆರ್ ಸಿ ಆದೇಶ ಹೊರಡಿಸಿತ್ತು. ಇದನ್ನು ನೆಸ್ಲೆ ಇಂಡಿಯಾ ಸಂಸ್ಥೆ ಪ್ರಶ್ನಿಸಿ ಕಾನೂನು ಸಮರಕ್ಕಿಳಿದಿತ್ತು. ಬಳಿಕ ಮ್ಯಾಗಿ ನ್ಯೂಡಲ್ಸ್ ಮೇಲಿನ ನಿಷೇಧ ತೆರವುಗೊಳಿಸಬೇಕೆಂದು ನೆಸ್ಲೆ ಕಂಪನಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ನಂತರ ಕೋರ್ಟ್ ಮ್ಯಾಗಿ ಮೇಲಿನ ನಿಷೇಧವನ್ನು ತೆರವುಗೊಳಿಸಿ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗುವ ಮ್ಯಾಗಿ ನ್ಯೂಡಲ್ಸ್ ಅನ್ನು ಪರೀಕ್ಷೆಗೊಳಪಡಿಸಬೇಕು ಎಂದು ನೆಸ್ಲೆ ಇಂಡಿಯಾಕ್ಕೆ ಈ ಹಿಂದೆ ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು.
ಬಾಂಬೆ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್ ಮೈಸೂರಿನಲ್ಲಿರುವ ಲ್ಯಾಬೋರೇಟರಿಯಲ್ಲಿ ಮರುಪರೀಕ್ಷೆ ನಡೆಸುವಂತೆ ಸೂಚನೆ ನೀಡಿತ್ತು. ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ವಿಚಾರಣೆ ನಡೆಸಿರುವ ಸುಪ್ರೀಕೋರ್ಟ್ ಮುಂದಿನ 8 ವಾರಗಳಲ್ಲಿ ಮ್ಯಾಗಿಯ ಹೊಸ ಮಾದರಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶ ಹೊರಡಿಸಿದೆ.
Advertisement