ಅಲಿಘಡ್: ಬಿಎಸ್ಪಿ ನೇತಾರೆ ಮಾಯಾವತಿಯ ಪಾದಕ್ಕೆ ನಮಸ್ಕರಿಸುತ್ತಿರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಅಭ್ಯರ್ಥಿಯೊಬ್ಬರ ವಿಧಾನಸಭಾ ಚುನಾವಣೆಗಿರುವ ಟಿಕೆಟ್‌ನ್ನು ರದ್ದು ಮಾಡಲಾಗಿದೆ.
ಉತ್ತರಪ್ರದೇಶದ 2017ರ ವಿಧಾನಸಭಾ ಚುನಾವಣೆಯಲ್ಲಿ ಅಟ್ರೌಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದ ಸಂಗೀತ ಚೌಧರಿ ಎಂಬ ಅಭ್ಯರ್ಥಿ, ಆಕೆ ಮತ್ತು ಆಕೆಯ ಮಕ್ಕಳು ಮಾಯಾವತಿಯ ಪಾದ ಮುಟ್ಟಿ ನಮಸ್ಕರಿಸುತ್ತಿರುವ ಛಾಯಾಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನು ನೋಡಿ ಕೆರಳಿದ ಮಾಯಾ, ಸಂಗೀತ ಅವರ ವಿಧಾನಸಭಾ ಟಿಕೆಟ್‌ನ್ನು ರದ್ದು ಮಾಡಿದ್ದಾರೆ. ಪಕ್ಷದ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಸಂಗೀತ ಅವರ ಟಿಕೆಟ್ ರದ್ದುಗೊಳಿಸಲಾಗಿದೆ ಎಂದು ಬಿಎಸ್ಪಿ ಅಧ್ಯಕ್ಷ ಅರವಿಂದ್ ಆದಿತ್ಯ ಹೇಳಿದ್ದಾರೆ.
ಅಟ್ರೌಲಿ ಕ್ಷೇತ್ರದಿಂದ ಸಂಗೀತ ಅವರ ಪತಿ ಧರ್ಮೇಂದ್ರ ಚೌಧರಿ ಸ್ಪರ್ಧಿಸಲಿದ್ದರು. ಆದರೆ ಕಳೆದ ವರ್ಷ ಜನವರಿಯಲ್ಲಿ ಅವರ ಹತ್ಯೆಯಾಗಿರುವುದರಿಂದ ಪತ್ನಿ ಸಂಗೀತ ಅವರಿಗೆ ಟಿಕೆಟ್ ನೀಡಲಾಗಿತ್ತು.